ಹಾವೇರಿ: ರಸ್ತೆಗೆ ಹೂ ಚೆಲ್ಲಿ ಬೆಳೆಗಾರರ ಪ್ರತಿಭಟನೆ - ಹಾವೇರಿಯಲ್ಲಿಂದು ಪ್ರತಿಭಟಿಸಿದ ಹೂ ಬೆಳೆಗಾರರು
Published : Oct 30, 2023, 8:22 PM IST
ಹಾವೇರಿ:ಸೇವಂತಿ ಸೇರಿದಂತೆ ವಿವಿಧ ಹೂಗಳ ದರ ದಿಢೀರ್ ಕುಸಿತವಾದ ಹಿನ್ನೆಲೆಯಲ್ಲಿ ಹೂ ಬೆಳೆಗಾರರು ಹಾವೇರಿಯಲ್ಲಿ ಇಂದು ಪ್ರತಿಭಟನೆ ನಡೆಸಿದರು. ಜಿಲ್ಲಾಸ್ಪತ್ರೆ ಮುಂದಿರುವ ಪುಷ್ಪ ಮಾರುಕಟ್ಟೆಯ ಮುಂದೆ ಸೇವಂತಿ, ಚೆಂಡು ಹೂಗಳು ಸೇರಿದಂತೆ ವಿವಿಧ ಹೂಗಳನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಹಳೆ ಪಿ.ಬಿ.ರಸ್ತೆಯಲ್ಲಿ ಹೂಗಳನ್ನು ಚೆಲ್ಲಿದ ಬೆಳೆಗಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ಹೂಗಳ ದರ ಕಡಿಮೆಯಾಗಿದ್ದು ಮಾರುಕಟ್ಟೆಗೆ ತಂದರೆ ಕೇಳುವವರೇ ಇಲ್ಲ. ಕೇಳಿದರೂ ಸಹ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಹೀಗಾದರೆ ನಾವೇನು ಮಾಡಬೇಕು ಎಂದು ಬೆಳೆಗಾರರು ಪ್ರಶ್ನಿಸಿದರು.
ಬೇರೆ ಬೇರೆ ಜಿಲ್ಲೆಗಳಿಂದ ಹೂಗಳನ್ನು ತಂದು ಇಲ್ಲಿಯ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದರು. ಕೊನೆಯ ಪಕ್ಷ ತಾವು ಬೆಳೆದ ಹೂಗಳನ್ನು ನಾವೇ ಮಾರಾಟ ಮಾಡುತ್ತೇವೆ ಎಂದರೆ ವರ್ತಕರು ಸ್ಥಳಾವಕಾಶ ನೀಡುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಿಂದಾಗಿ ಕೆಲಕಾಲ ಜಿಲ್ಲಾಸ್ಪತ್ರೆಯ ಮುಂದಿನ ಪುಷ್ಪ ಮಾರುಕಟ್ಟೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಕೆಲಕಾಲ ಟ್ರಾಫಿಕ್ ಸಮಸ್ಯೆ ಎದುರಾಯಿತು.
ಇದನ್ನೂ ಓದಿ: ನವರಾತ್ರಿ ಹಬ್ಬ ಪ್ರಾರಂಭ: ಹೂವುಗಳ ಬೆಲೆ ಗಣನೀಯ ಏರಿಕೆ