ಉಜ್ಜಯಿನಿಯಲ್ಲಿ ಧಾರಾಕಾರ ಮಳೆ.. ಮಹಾಕಾಳೇಶ್ವರ ದೇವಸ್ಥಾನ ಜಲಾವೃತ!
ಉಜ್ಜಯಿನಿ, ಮಧ್ಯಪ್ರದೇಶ:ಭಾರಿ ಮಳೆಗೆ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಜಲಾವೃತವಾಗಿದೆ. ದೇವಾಲಯದ ಸಂಕೀರ್ಣದ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ದೇವಾಲಯ ಜಲಾವೃತವಾಗಿರುವುದು ಗೋಚರಿಸುತ್ತದೆ. ದೇವಸ್ಥಾನದಲ್ಲಿ ನೀರು ತುಂಬಿರುವ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಖಚಿತಪಡಿಸಿಲ್ಲ. ಉಜ್ಜಯಿನಿ, ದೇವಾಸ್, ಇಂದೋರ್ ಸೇರಿದಂತೆ ಎಲ್ಲ ಕಡೆ ಭಾರಿ ಮಳೆಯಾಗುತ್ತಿದೆ. ಅಷ್ಟೇ ಅಲ್ಲ ಕೆಲ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಜ್ಜಯಿನಿಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಹನ್ನೆರಡನೇ ತರಗತಿಯ ಮಕ್ಕಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಉಜ್ಜಯಿನಿಯಲ್ಲಿ ತಡರಾತ್ರಿ ಆರಂಭವಾದ ಭಾರಿ ಮಳೆಯಿಂದಾಗಿ ಹಲವೆಡೆ ಜಲಾವೃತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಹಲವೆಡೆ ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿವೆ. ಉಜ್ಜಯಿನಿಯ ದಾಹ ನೀಗಿಸುವ ಅಣೆಕಟ್ಟಿನ ಮೂರನೇ ನಂಬರ್ ಗೇಟ್ ಕೂಡ ತೆರೆಯಲಾಗಿದೆ.
ಹವಾಮಾನ ಇಲಾಖೆ ಎಚ್ಚರಿಕೆ: ಮಧ್ಯಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಉಜ್ಜಯಿನಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಇದರಿಂದ ಸುರಿದ ಭಾರಿ ಮಳೆಗೆ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಬಿರುಸಿನ ಮಳೆಯ ಜತೆಗೆ ಸಿಡಿಲು ಸಹಿತ ಆರ್ಭಟಿಸಿದೆ. ಮಳೆಯ ಆರ್ಭಟ ಜೋರಾಗಿದ್ದು, ಎಲ್ಲ ಕಡೆ ಜಲಾವೃತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾಕಾಳೇಶ್ವರ ದೇವಾಲಯವೂ ಸಹ ಜಲಾವೃತಗೊಂಡಿದ್ದು, ಅದರ ವಿಡಿಯೋ ಕೂಡ ವೈರಲ್ ಆಗ್ತಿದೆ.
ಉಜ್ಜಯಿನಿ ಜಲಾವೃತ: ಉಜ್ಜಯಿನಿಯ ಪ್ರಮುಖ ನಗರಗಳು ಜಲಾವೃರಗೊಂಡಿವೆ. ಚಾಮುಂಡಾ ಮಾತಾ ಮಂದಿರ ಚೌರಾಹಾ, ಅಟ್ಲಾಸ್ ಚೌರಾಹಾ, ಹೊಸ ರಸ್ತೆ, ಗೋಪಾಲ್ ಮಂದಿರ, ಚಾಮುಂಡಾ ಮಾತಾ ಮಂದಿರ, ದೇವಾಸ್ ಗೇಟ್, ಮಾಲಿಪುರ, ಆರ್ಯ ಸಮಾಜ ಮಾರ್ಗ, ಫ್ರೀಗಂಜ್, ಇಂದಿರಾ ಗಾಂಧಿ ಚೌರಾ, ನೀಲಗಂಗಾ ಚೌರಾ, ರಿಷಿ ನಗರ ಚೌರಾ, ಸಿಂಧಿ ಕಾಲೋನಿ ಚೌರಾ, ಸೇಥಿ ನಗರ ಮತ್ತು ಗಡ ಪುಲಿಯಾ ಪ್ರದೇಶಗಳು ನೀರಿನಿಂದ ಆವೃತವಾಗಿದೆ.
ಓದಿ:ಉತ್ತರ ಪ್ರದೇಶದಲ್ಲಿ ಭೀಕರ ಪ್ರವಾಹ: ಕೊತ್ವಾಲಿ ನದಿ ನೀರಿನಲ್ಲಿ ಸಿಲುಕಿದ್ದ 50 ಪ್ರಯಾಣಿಕರ ರಕ್ಷಣೆ..!