ಮಹಾಶಿವರಾತ್ರಿ ವಿಶೇಷ.. ಮಧುರೈಗೆ ರಾಷ್ಟ್ರಪತಿ ಮುರ್ಮು ಆಗಮನ: ವಿಶೇಷ ಭದ್ರತೆ
ಮಧುರೈ(ತಮಿಳುನಾಡು): ಇಂದು ಭಾರತದಾದ್ಯಂತ ಮಹಾಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಮಹಾಶಿವರಾತ್ರಿ ದಿನದಂದು ತಮಿಳುನಾಡಿನ ಎಲ್ಲಾ ಶಿವ ದೇವಾಲಯಗಳು ಮುಂಜಾನೆಯಿಂದಲೇ ಜನರಿಂದ ತುಂಬಿ ತುಳುಕುತ್ತಿದೆ. ಈ ಮಧ್ಯೆ ಕೊಯಮತ್ತೂರಿನ ಇಶಾ ಕೇಂದ್ರದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಳ್ಳುತ್ತಿದ್ದಾರೆ. ರಾಷ್ಟ್ರಪತಿಯಾದ ನಂತರ ತಮಿಳುನಾಡಿಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
ಪ್ರಸಿದ್ಧ ಮಧುರೈ ಮೀನಾಕ್ಷಿ ಅಮ್ಮನ ದೇವಸ್ಥಾನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿದರು. ಈ ಹಿನ್ನೆಲೆಯಲ್ಲಿ ಮಧುರೈ ನಗರದಾದ್ಯಂತ ಐದು ಹಂತದ ಭದ್ರತೆ ನಿಯೋಜಿಸಲಾಗಿದೆ. ಮಧುರೈ ಮೀನಾಕ್ಷಿ ಅಮ್ಮನ ದೇವಸ್ಥಾನದ ಸುತ್ತಲಿನ ಎಲ್ಲಾ ಪ್ರಮುಖ ಬೀದಿಗಳು ಮತ್ತು ಹೊರ ಬೀದಿಗಳಲ್ಲಿ ಪೊಲೀಸ್ ಭದ್ರತೆಯನ್ನು ಬಲಪಡಿಸಲಾಗಿದೆ. ಅಂತೆಯೇ ದೇಗುಲದಲ್ಲಿ ಸಾರ್ವಜನಿಕ ಸಂಚಾರವನ್ನು ನಿಷೇಧಿಸಲಾಗಿದೆ . ಜತೆಗೆ ಮಧುರೈ ನಗರದಲ್ಲಿ ಈಗಾಗಲೇ ವಿವಿಧೆಡೆ ಸಂಚಾರ ಬದಲಾವಣೆ ಕೂಡಾ ಮಾಡಲಾಗಿದೆ. ಮಧುರೈ ಮೀನಾಕ್ಷಿ ಅಮ್ಮನ ದೇವಸ್ಥಾನದಲ್ಲಿ ದರ್ಶನ ಪಡೆದ ಬಳಿಕ ದ್ರೌಪದಿ ಮುರ್ಮು ಅಲ್ಲಿ ನಡೆಯಲಿರುವ ಅನ್ನದಾನ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ.
ಮಧುರೈ ಭೇಟಿಯ ನಂತರ ರಾಷ್ಟ್ರಪತಿಗಳು ವಿಮಾನದ ಮೂಲಕ ಕೊಯಮತ್ತೂರಿಗೆ ತೆರಳಲಿದ್ದಾರೆ. ಅಲ್ಲಿ ಅವರು ಇಶಾ ಯೋಗ ಕೇಂದ್ರದಲ್ಲಿ ನಡೆದ ಮಹಾಶಿವರಾತ್ರಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಳೆ (ಫೆ.19) ಕೊಯಮತ್ತೂರಿನಿಂದ ಖಾಸಗಿ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ. ತಮಿಳುನಾಡಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ 2 ದಿನಗಳ ಭೇಟಿ ಹಿನ್ನೆಲೆ ಎರಡೂ ಜಿಲ್ಲೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.