10 ದಿನದಿಂದ ಉತ್ತರಕಾಶಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಮೊದಲ ದೃಶ್ಯ
Published : Nov 21, 2023, 9:43 AM IST
ಉತ್ತರಕಾಶಿ(ಉತ್ತರಾಖಂಡ): ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಹತ್ತನೇ ದಿನವೂ ಮುಂದುವರೆದಿದೆ. ಸುರಂಗದ ಮೇಲಿನಿಂದ ರಂಧ್ರ ಕೊರೆದು ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ. ಈ ಮಧ್ಯೆ ಎಂಡೋಸ್ಕೋಪಿಕ್ ಫ್ಲೆಕ್ಸಿ ಕ್ಯಾಮರಾವನ್ನು ಸುರಂಗದೊಳಗೆ ಕಳುಹಿಸಲಾಗಿತ್ತು. ಇದೀಗ ಸುರಂಗದೊಳಗಿನ ದೃಶ್ಯಗಳನ್ನು ಸೆರೆ ಹಿಡಿಯುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ.
ಈಗಾಗಲೇ ಸುರಂಗದೊಳಗೆ ದೊಡ್ಡ ಪೈಪ್ ಅಳವಡಿಸಲಾಗಿದೆ. ಇದರ ಮೂಲಕ ಆಹಾರ, ನೀರು, ಔಷಧಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಕಳೆದ ರಾತ್ರಿ ಕಾರ್ಮಿಕರಿಗೆ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುವುದರ ಜೊತೆಗೆ, ಎಂಡೋಸ್ಕೋಪಿಕ್ ಫ್ಲೆಕ್ಸಿ ಕ್ಯಾಮರಾವನ್ನು ಸುರಂಗದೊಳಗೆ ಕಳುಹಿಸಲಾಗಿತ್ತು. ಈ ಮೂಲಕ ಸುರಂಗದೊಳಗೆ ಸಿಲುಕಿಕೊಂಡಿರುವ ಕಾರ್ಮಿಕರನ್ನೊಳಗೊಂಡ ದೃಶ್ಯಗಳು ರಕ್ಷಣಾ ತಂಡಕ್ಕೆ ಲಭ್ಯವಾಗಿವೆ.
ವಿಡಿಯೋದಲ್ಲಿ, ರಕ್ಷಣಾ ಅಧಿಕಾರಿಗಳು ಕ್ಯಾಮರಾ ಮುಂದೆ ಬಂದು ಮಾತನಾಡುವಂತೆ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಲ್ಲಿ ಕೇಳುತ್ತಿದ್ದಾರೆ. "ಕ್ಯಾಮರಾ ಮುಂದೆ ಬಂದು ವಾಕಿ ಟಾಕಿ ಮೂಲಕ ನಮ್ಮೊಂದಿಗೆ ಮಾತನಾಡಿ" ಎಂದು ಅಧಿಕಾರಿಗಳು ಹೇಳುತ್ತಿರುವುದು ದೃಶ್ಯದಲ್ಲಿದೆ.
ನವೆಂಬರ್ 12ರ ಭಾನುವಾರ ಮುಂಜಾನೆ ಉತ್ತರಾಖಂಡದ ಬ್ರಹ್ಮಖಾಲ್ ಮತ್ತು ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾ ಮತ್ತು ದಾಂಡಲ್‌ಗಾಂವ್ ನಡುವೆ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗ 21 ಮೀಟರ್ನಷ್ಟು ಕುಸಿತವಾಗಿತ್ತು. ಸುರಂಗ ಮಾರ್ಗದ ದುರಸ್ತಿಗೆ ವಿವಿಧೆಡೆಯಿಂದ 40 ಮಂದಿ ಕಾರ್ಮಿಕರು ತೆರಳಿದ್ದರು. ಈ ವೇಳೆ, ಸುರಂಗದ ಮತ್ತೊಂದು ಭಾಗ ಕುಸಿದಿತ್ತು. ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಇದನ್ನೂ ಓದಿ:ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ರೋಬೋಗಳ ಬಳಕೆ, ಪೈಪ್ನಿಂದ ಆಹಾರ ಪೂರೈಕೆ