ಮಂಗಳೂರು: ಮೊದಲ ಬಾರಿಗೆ ಮತ ಹಕ್ಕು ಚಲಾಯಿಸಿದ ಯುವ ಮತದಾರರು ಫುಲ್ ಖುಷ್ - ಯುವ ಮತದಾರರ ಪ್ರತಿಕ್ರಿಯೆ
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ಸಾಹದಿಂದ ಮತದಾನ ನಡೆಯುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಯುವ ಮತದಾರರು ಹುಮ್ಮಸ್ಸಿನಿಂದ ಹಕ್ಕು ಚಲಾಯಿಸುತ್ತಿದ್ದಾರೆ. ಮೊದಲ ಬಾರಿಗೆ ತಮ್ಮ ಮತದಾನ ಮಾಡಿದ ಯುವ ಮತದಾರರ ಪ್ರತಿಕ್ರಿಯೆ ಹೀಗಿದೆ.
ಜಿಲ್ಲೆಯಲ್ಲಿ 18 ಮತ್ತು 19 ವಯಸ್ಸಿನ ಒಟ್ಟು 37,292 ಮತದಾರರಿದ್ದಾರೆ. ಬೆಳ್ತಂಗಡಿಯಲ್ಲಿ 4,896, ಮೂಡಬಿದಿರೆಯಲ್ಲಿ 3,987, ಮಂಗಳೂರು ಉತ್ತರದಲ್ಲಿ 4,900, ಮಂಗಳೂರು ದಕ್ಷಿಣದಲ್ಲಿ 3,968, ಮಂಗಳೂರಿನಲ್ಲಿ 4,954, ಬಂಟ್ವಾಳದಲ್ಲಿ 5,266, ಪುತ್ತೂರಿನಲ್ಲಿ 4,809, ಸುಳ್ಯದಲ್ಲಿ 4,512 ಯುವ ಮತದಾರರಿದ್ದಾರೆ.
ಮೊದಲ ಬಾರಿಗೆ ಮತ ಚಲಾಯಿಸಿದ ಕೀರ್ತನಾ ಮಾತನಾಡಿ, ನನಗೆ ಕರ್ತವ್ಯ ನಿಭಾಯಿಸಿದ ತೃಪ್ತಿ ಇದೆ. ಎಲ್ಲರೂ ಬೇಗ ಬಂದು ಮತದಾನ ಮಾಡಿ ತಮ್ಮ ಕರ್ತವ್ಯ ನಿಭಾಯಿಸಲಿ. ಮತದಾನ ಜವಾಬ್ದಾರಿ ಇದೆ. ಎಲ್ಲರೂ ಇದನ್ನು ನಿಭಾಯಿಸುವ ವಿಶ್ವಾಸ ಇದೆ ಎಂದು ಹೇಳಿದರು.
ಯುವ ಮತದಾರರರೆ ರಿಯಾ ಜೆಸಿಕಾ ಫರ್ನಾಂಡಿಸ್ ಪ್ರತಿಕ್ರಿಯಿಸಿ, ಮೊದಲ ಬಾರಿ ಮತ ಚಲಾಯಿಸುವಾಗ ಏನೂ ಗೊತ್ತಿರಲಿಲ್ಲ. ನನಗೆ ನನ್ನ ಅಮ್ಮ ಹೇಗೆ ಮತ ಚಲಾಯಿಸಬೇಕು ಎಂದು ಹೇಳಿಕೊಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿಯ ಸಂದೇಶ ನೋಡಿ ಮತ ಚಲಾಯಿಸಿದ್ದೇನೆ. ತಮಗೆ ಎನಿಸಿದ ಸೂಕ್ತ ವ್ಯಕ್ತಿಯನ್ನು ಮತದಾನ ಮಾಡಿ ಎಂದು ಅಭಿಪ್ರಾಯಪಟ್ಟರು.