ಆನೇಕಲ್: ಪಟಾಕಿ ದಾಸ್ತಾನು ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ.. 11 ಜನರು ಸಾವು - ಪಟಾಕಿ ಅಂಗಡಿ
Published : Oct 7, 2023, 6:05 PM IST
|Updated : Oct 7, 2023, 9:05 PM IST
ಆನೇಕಲ್ (ಬೆಂಗಳೂರು): ಪಟಾಕಿ ದಾಸ್ತಾನು ಮಳಿಗೆಯಲ್ಲಿ ಬೆಂಕಿ ಹೊತ್ತಿ ಉರಿದ ಘಟನೆ ಆನೇಕಲ್ ತಾಲೂಕಿನ ಬೆಂಗಳೂರು-ಹೊಸೂರು ಅಂತಾರಾಜ್ಯ ಹೆದ್ದಾರಿಯಲ್ಲಿನ ಅತ್ತಿಬೆಲೆಯಲ್ಲಿ ಶನಿವಾರ ಸಂಭವಿಸಿದೆ. ಅತ್ತಿಬೆಲೆ ಗಡಿಯಲ್ಲಿನ ಬಾಲಾಜಿ ಕ್ರಾಕರ್ಸ್ ಎಂಬ ಪಟಾಕಿ ದಾಸ್ತಾನು ಮಳಿಗೆಯಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಕಿಡಿಯಿಂದ ಇಡೀ ಅಂಗಡಿ ಸ್ಫೋಟಗೊಂಡು ಅವಘಡ ಸಂಭವಿಸಿದ್ದು, 11 ಜನರು ಬೆಂಕಿಗೆ ಸಿಲುಕಿ ಮೃತರಾಗಿದ್ದಾರೆ.
ನವೀನ್ ಎಂಬುವರಿಗೆ ಸೇರಿದ ಪಟಾಕಿ ಅಂಗಡಿ ಇದಾಗಿದ್ದು, ಯಾವಾಗಲೂ ತೆರೆದಿರುತ್ತಿದ್ದ ಮಳಿಗೆ ಇದಾಗಿತ್ತು. ಪ್ರತಿ ವರ್ಷದಂತೆ ದೀಪಾವಳಿಗಾಗಿ ವಿಶೇಷ ಪಟಾಕಿ ಲೋಡ್ ಲಾರಿಯಿಂದ ಇಳಿಸುವ ಸಂದರ್ಭದಲ್ಲಿ ಈ ಅಚಾತುರ್ಯ ನಡೆದಿದೆ. ಏಕಾಏಕಿ ಬೆಂಕಿ ಆವರಿಸಿದ್ದು, ದಾಸ್ತಾನು ಮಳಿಗೆಯೊಳಗಿದ್ದವರು ಬೆಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಪಾರಾಗಿ ಹೊರಗೆ ಓಡಿ ಬಂದಿದ್ದಾರೆ. ಇನ್ನೂ ಕೆಲವರು ಬೆಂಕಿಗೆ ಸಿಲುಕಿರುವ ಅನುಮಾನವಿದ್ದು, ಸಾವಿನ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಅತ್ತಿಬೆಲೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ. ಇದೇ ವೇಳೆ ಕೆಲ ವಾಹನಗಳಿಗೂ ಕೂಡ ಬೆಂಕಿ ಆವರಿಸಿಕೊಂಡು, ಹಾನಿ ಸಂಭವಿಸಿದೆ.
ಇದನ್ನೂ ಓದಿ:ನೆಲಮಂಗಲ: ಹೊತ್ತಿ ಉರಿದ ಕಾರು, 50 ಸಾವಿರ ರೂಪಾಯಿ ನಗದು ಭಸ್ಮ