ಹೊತ್ತಿ ಉರಿದ ಜೋರ್ಹತ್ ಪಟ್ಟಣ: ಕ್ಷಣಾರ್ಧದಲ್ಲಿ ಐತಿಹಾಸಿಕ ಚೌಕ್ ಬಜಾರ್ ನಾಶ - ಐತಿಹಾಸಿಕ ಚೌಕ್ ಬಜಾರ್
ಜೋರ್ಹತ್(ಅಸ್ಸೋಂ): ಎರಡು ತಿಂಗಳ ಬಳಿಕ ಮತ್ತೆ ಜೋರ್ಹತ್ ಪಟ್ಟಣದಲ್ಲಿ ಬೃಹತ್ ಅಗ್ನಿ ಅವಘಡ ಸಂಭವಿಸಿದೆ. ಗುರುವಾರ ರಾತ್ರಿ 9:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆಗೆ ಜೋರ್ಹತ್ ನಗರದ ಮಧ್ಯಭಾಗದಲ್ಲಿರುವ ಐತಿಹಾಸಿಕ ಚೌಕ್ ಬಜಾರ್ ಸಂಪೂರ್ಣ ನಾಶವಾಗಿದೆ. ಬಜಾರ್‌ನಲ್ಲಿನ 530 ವ್ಯಾಪಾರಿ ಮಳಿಗೆಗಳು ಸುಟ್ಟುಕರಕಲಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ. ಆದರೆ ಕೆಲ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ ಎಂದು ಕೆಲ ಉದ್ಯಮಿಗಳು ಆರೋಪಿಸಿದ್ದಾರೆ.
ಅಗ್ನಿ ಅವಘಡದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿದೆ ಎಂದು ಕೆಲ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಚೌಕ್ ಬಜಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಭಾರಿ ಪಟಾಕಿಗಳ ಸದ್ದು ಕೇಳಿ ಬರುತ್ತಿತ್ತು. ಇಲ್ಲಿ ಅಪಾಯಕಾರಿ ಪಟಾಕಿಗಳನ್ನು ಸಂಗ್ರಹಿಸಿಟ್ಟವರು ಯಾರು ಎಂಬುದು ಮಾತ್ರ ನಿಗೂಢವಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈವರೆಗೆ ಬೆಂಕಿಯನ್ನು ನಂದಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ:ಸ್ಪೋರ್ಟ್ಸ್ ಶಾಪಿಂಗ್ ಮಾಲ್ನಲ್ಲಿ ಭಾರಿ ಅಗ್ನಿ ಅವಘಡ: ಇತರ ಕಟ್ಟಡಗಳಿಗೆ ವ್ಯಾಪಿಸಿದ ಬೆಂಕಿ