500 ಅಂಗಡಿ ಅಗ್ನಿಗಾಹುತಿ, ಕೋಟಿಗೂ ಅಧಿಕ ನಷ್ಟ!- ವಿಡಿಯೋ
ಉತ್ತರ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಕಾನ್ಪುರ ನಗರದ ಅನ್ವರ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ಸ್‌ಮಂಡಿಯ ಬಟ್ಟೆ ಮಾರುಕಟ್ಟೆಯಲ್ಲಿ ಗುರುವಾರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿತು. ಸುಮಾರು 500 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಬಟ್ಟೆ ಮತ್ತಿತರ ವಸ್ತುಗಳು ಸುಟ್ಟು ಕರಕಲಾಗಿವೆ. ಈದ್ ಸೀಸನ್ ನಿಮಿತ್ತ ಸಂಗ್ರಹಿಸಿಟ್ಟಿದ್ದ ದಾಸ್ತಾನು ನಾಶವಾಗಿದೆ ಎಂದು ವರ್ತಕರು ಹೇಳಿದ್ದಾರೆ.
ಮಾರುಕಟ್ಟೆಯಲ್ಲಿರುವ ಎಆರ್ ಟವರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಟ್ಟೆ, ರಟ್ಟು, ಪೇಪರ್ ನಂತಹ ದಹನಕಾರಿ ವಸ್ತುಗಳು ಇದ್ದುದರಿಂದ ಸ್ವಲ್ಪ ಹೊತ್ತಿನಲ್ಲಿ ಅಪಾರ ನಷ್ಟ ಉಂಟಾಗಿದೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬರುವಷ್ಟರಲ್ಲಿ 100ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಹೋಗಿದ್ದವು.
ಗಾಳಿಯ ವೇಗ ಹೆಚ್ಚಿದ್ದರಿಂದ ಬೆಂಕಿ ಬೇಗ ವ್ಯಾಪಿಸಿದೆ. ನೆರೆ ಜಿಲ್ಲೆಗಳಿಂದಲೂ ಅಗ್ನಿಶಾಮಕ ವಾಹನಗಳನ್ನು ತಂದು ಬೆಂಕಿ ನಂದಿಸುವ ಪ್ರಯತ್ನ ನಡೆಸಲಾಗಿದೆ. ಶುಕ್ರವಾರ ಬೆಳಗಿನ ಜಾವದವರೆಗೂ ಬೆಂಕಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಟ್ರಾನ್ಸ್‌ಫಾರ್ಮರ್‌ನ ಶಾರ್ಟ್ ಸರ್ಕ್ಯೂಟ್‌ನಿಂದ ಆಕಸ್ಮಿಕ ಹರಡಿದೆ ಎಂದು ಉತ್ತರ ಪ್ರದೇಶ ಗಾರ್ಮೆಂಟ್ಸ್ ತಯಾರಕರು ಮತ್ತು ವರ್ತಕರ ಸಂಘದ ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿ ಗುರ್ಜಿಂದರ್ ಸಿಂಗ್ ಹೇಳಿದರು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸರ್ಕಾರ ವ್ಯಾಪಾರಿಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಶಿಕ್ಷಣವಿಲ್ಲ, ಕೆಲಸವೂ ಇಲ್ಲ..: ತಾಲಿಬಾನ್ ಆಡಳಿತದಲ್ಲಿ ಮಹಿಳೆಯರ ಸ್ಥಿತಿ ಶೋಚನೀಯ!