Goods train incident: ಒಡಿಶಾದ ಬಾಲಾಸೋರ್ನಲ್ಲಿ ಮತ್ತೊಂದು ಗೂಡ್ಸ್ ರೈಲಿಗೆ ಬೆಂಕಿ: ವಿಡಿಯೋ
ಒಡಿಶಾ:ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ತ್ರಿವಳಿ ರೈಲು ಭೀಕರ ದುರಂತ ಸಂಭವಿಸಿದ 275 ಜನರ ಪ್ರಾಣ ಹಾನಿ ಸಂಭವಿಸಿತ್ತು. ಇದೀಗ ಮತ್ತೊಂದು ಗೂಡ್ಸ್ ರೈಲಿನ ಬೋಗಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತಂದರು.
ಬಾಲಸೋರ್ ಜಿಲ್ಲೆಯ ರುಪ್ಸಾ ರೈಲು ನಿಲ್ದಾಣದಲ್ಲಿ ಸಾಗುತ್ತಿದ್ದ ಗೂಡ್ಸ್ ರೈಲಿನ ಕಂಪಾರ್ಟ್‌ಮೆಂಟ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಸಿಬ್ಬಂದಿ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ.
ಜೂನ್ 2 ರಂದು ಇದೇ ಬಾಲಾಸೋರ್ ಜಿಲ್ಲೆಯ ಬಹನಾಗ ರೈಲು ನಿಲ್ದಾಣದ ಬಳಿ ತ್ರಿವಳಿ ರೈಲು ದುರಂತ ಸಂಭವಿಸಿ ನೂರಾರು ಜನರು ಬಲಿಯಾಗಿದ್ದರು. ಚೆನ್ನೈಗೆ ಹೊರಟಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಹಳಿ ತಪ್ಪಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ದುರ್ಘಟನೆಯಲ್ಲಿ ಎಲ್ಲ ಬೋಗಿಗಳು ಮತ್ತೊಂದು ಹಳಿಯ ಮೇಲೆ ಬಿದ್ದಿದ್ದವು. ಈ ವೇಳೆ ಅದೇ ಲೈನ್ ಮಾರ್ಗವಾಗಿ ಬೆಂಗಳೂರಿನಿಂದ ಬಂದ ಹೌರಾ ಎಕ್ಸ್‌ಪ್ರೆಸ್ ಬೋಗಿಗಳಿಗೆ ರಭಸವಾಗಿ ಗುದ್ದಿದ್ದು, ಇನ್ನಷ್ಟು ಸಾವು ನೋವಿಗೆ ಕಾರಣವಾಗಿತ್ತು. ಈ ಬಗ್ಗೆ ಸಿಬಿಐ ತನಿಖೆ ನಡೆಸಲಾಗುತ್ತಿದೆ.