ಹಾವೇರಿಯ ಪಟಾಕಿ ದಾಸ್ತಾನು ಗೋದಾಮಿನಲ್ಲಿ ಬೆಂಕಿ.. ಒಂದೂವರೆ ಕೋಟಿ ರೂ. ಮೌಲ್ಯದ ಪಟಾಕಿ ಸುಟ್ಟು ಭಸ್ಮ
Published : Aug 29, 2023, 2:51 PM IST
|Updated : Aug 29, 2023, 6:05 PM IST
ಹಾವೇರಿ:ಸಮೀಪದ ಆಲದಕಟ್ಟಿ ಗ್ರಾಮದಲ್ಲಿನ ಭೂಮಿಕಾ ಪಟಾಕಿ ಅಂಗಡಿ ಮತ್ತು ಗೋದಾಮಿನಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದ್ದು ಘಟನೆಯಲ್ಲಿ ಸುಮಾರು ಒಂದೂವರೆ ಕೋಟಿ ರೂ. ಮೌಲ್ಯದ ಪಟಾಕಿ ಸುಟ್ಟು ಭಸ್ಮವಾಗಿದೆ. ಎರಡು ಬೈಕ್ಗಳು ಕೂಡ ಸುಟ್ಟಿವೆ. ಘಟನೆಯಲ್ಲಿ ವಾಸಿಮ್ ಹರಿಹರ (32) ಎಂಬಾತ ಗಾಯಗೊಂಡಿದ್ದು ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಮಾರ್ ಸಾತನೇಹಳ್ಳಿ ಎಂಬುವವರಿಗೆ ಸೇರಿದ ಪಟಾಕಿ ಅಂಗಡಿ ಮತ್ತು ಗೋದಾಮು ಇದಾಗಿದೆ.
ಗೋದಾಮಿನ ಗೇಟ್ ವೇಲ್ಡಿಂಗ್ ಮಾಡಿಸಲು ಮುಂದಾಗಿರುವುದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ವೇಲ್ಡಿಂಗ್ ಮಾಡುತ್ತಿದ್ದಾಗ ಕಿಡಿ ತಾಗಿ ಈ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಮಧ್ಯಾಹ್ನ 12 ಗಂಟೆಯಿಂದ ಆರಂಭವಾದ ಕಾರ್ಯಚರಣೆ ಸಂಜೆ 4 ಗಂಟೆವರೆಗೆ ನಡೆಯಿತು. ಸುಮಾರು 30ಕ್ಕೂ ಅಧಿಕ ಅಗ್ನಿಶಾಮಕ ದಳದ ವಾಹನಗಳ ನೀರು ಬಳಿಸಿದರೂ ಬೆಂಕಿ ತಹಬದಿಗೆ ಬಂದಿರಲಿಲ್ಲ. ಜಿಲ್ಲಾಧಿಕಾರಿ ರಘುನಂದಮೂರ್ತಿ, ಎಸ್ಪಿ ಶಿವಕುಮಾರ್ ಗುಣಾರೆ ಸೇರಿದಂತೆ ವಿವಿಧ ಅಧಿಕಾರಿಗಳು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
''ಪಟಾಕಿ ಅಂಗಡಿಯ ಗೋದಾಮು ಮಾಲಿಕರು ಗಣೇಶ ಚತುರ್ಥಿ ಮತ್ತು ದೀಪಾವಳಿ ನಿಮಿತ್ತ ಕೋಟ್ಯಾಂತರ ರೂ. ಪಟಾಕಿ ಸಂಗ್ರಹಿಸಿರುವ ಅಂಶ ಬೆಳಕಿಗೆ ಬಂದಿದೆ. ಕಾನೂನು ಮೀರಿ ಪಟಾಕಿ ಸಂಗ್ರಹ ಮಾಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ'' ಎಂದು ಪರಿಶೀಲನೆ ಬಳಿಕ ಎಸ್ಪಿ ಶಿವಕುಮಾರ್ ಗುಣಾರೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:Madurai Train Fire Accident: ಮಧುರೈ ರೈಲಿನಲ್ಲಿ ಅಗ್ನಿ ಅವಘಡ: ಸಾವಿನ ಸಂಖ್ಯೆ 9ಕ್ಕೆ ಏರಿಕೆ...