ಬೆಳಗಾವಿ: ಕೆನರಾ ಬ್ಯಾಂಕ್ ATM ಕೇಂದ್ರದಲ್ಲಿ ಬೆಂಕಿ ಅನಾಹುತ - ಈಟಿವಿ ಭಾರತ ಕನ್ನಡ
ಚಿಕ್ಕೋಡಿ:ಎಟಿಎಂ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿ ಇಂದು ಬೆಳಗ್ಗೆ ನಡೆಯಿತು. ಕೆನರಾ ಬ್ಯಾಂಕ್ ಎಟಿಎಂ ಅನಾಹುತಕ್ಕೀಡಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಯ ಕೆನ್ನಾಲಿಗೆಗೆ ಎಟಿಎಂ ಮಷೀನ್ ಸುಟ್ಟು ಕರಕಲಾಗಿದೆ. ಲಕ್ಷಾಂತರ ರೂಪಾಯಿ ಹಣವೂ ಬೆಂಕಿಗಾಹುತಿದೆ ಎಂದು ತಿಳಿದುಬಂದಿದೆ.
ಎಟಿಎಂ ಕೇಂದ್ರದಲ್ಲಿ ಬೆಂಕಿ ಗಮನಿಸಿದ ಸ್ಥಳೀಯರು ಕೂಡಲೇ ನೀರು ತಂದು ಎರಚಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೂ ಬೆಂಕಿ ನಂದಿಸಲಾಗದ ಕಾರಣ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಆಗಮಿಸಿದ ಹುಕ್ಕೇರಿ ಅಗ್ನಿಶಾಮಕ ದಳ ಸಿಬ್ಬಂದಿ ಸಂಪೂರ್ಣವಾಗಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು. ಸ್ಥಳಕ್ಕೆ ಬ್ಯಾಂಕಿನ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ: ಗುಂಡ್ಲುಪೇಟೆ: ಕಾರು- ಈಚರ್ ವಾಹನ ಡಿಕ್ಕಿಯಾಗಿ ಬೆಂಕಿ: ಚಾಲಕ ಸಜೀವ ದಹನ