ಆ್ಯಂಬುಲೆನ್ಸ್ಗೆ ದಾರಿ ಬಿಡದೇ ಕಿರಿಕ್ ಆರೋಪ: ಬೈಕ್ ಸವಾರನ ವಿರುದ್ಧ ಎಫ್ಐಆರ್
ಮೈಸೂರು: ರೋಗಿಯನ್ನು ಕರೆತರುತ್ತಿದ್ದ ಆ್ಯಂಬುಲೆನ್ಸ್ ಮುಂದೆ ಸಾಗಲು ದಾರಿ ಬಿಡದೇ ಕಿರಿಕ್ ಮಾಡಿದ ಆರೋಪದಡಿ ಬೈಕ್ ಸವಾರನ ವಿರುದ್ದ ಪ್ರಕರಣ ದಾಖಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ತುರ್ತು ವಾಹನ ಸಂಚಾರಕ್ಕೆ ಅಡಚಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಗಗನ್ ಎಂಬಾತನ ವಿರುದ್ಧ ನಗರದ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜು.9 ರಂದು ಈ ಘಟನೆ ನಡೆದಿತ್ತು.
ಪ್ರಕರಣದ ವಿವರ: ಹುಣಸೂರಿನಿಂದ ಮೈಸೂರಿಗೆ 108 ಆ್ಯಂಬುಲೆನ್ಸ್ ರೋಗಿಯನ್ನು ಕರೆದುಕೊಂಡು ಬರುತಿತ್ತು. ಆ ಸಂದರ್ಭದಲ್ಲಿ ಹಳೆಯ ಬಸಪ್ಪ ಮೆಮೋರಿಯಲ್ ಆಸ್ಪತ್ರೆಯ ಬಳಿ ರಸ್ತೆಯಲ್ಲಿ ಬರುತಿದ್ದ ವಾಹನಕ್ಕೆ ದಾರಿ ಬಿಡದೇ ಬೈಕ್ ಸವಾರ ಗಗನ್ ಎಂಬ ಯುವಕ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದ. ಬೈಕ್ ಸವಾರನ ವರ್ತನೆಯನ್ನು ಆ್ಯಂಬುಲೆನ್ಸ್ ಚಾಲಕ ಪ್ರಕಾಶ್ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಈ ವೈರಲ್ ವಿಡಿಯೋ ಆಧಾರವಾಗಿಟ್ಟುಕೊಂಡು ವಿವಿ ಪುರಂ ಸಂಚಾರಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ರ‍್ಯಾಲಿಗೆ ಅಡ್ಡಿಪಡಿಸಲು ಆ್ಯಂಬುಲೆನ್ಸ್ ತಂದವನನ್ನು ಬಂಧಿಸಲಿ : ಡಿಕೆ ಶಿವಕುಮಾರ್