ಆಮರಣಾಂತ ಉಪವಾಸ ಸತ್ಯಾಗ್ರಹ: ರೈತರ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು - ರೈತರು ಅಹೋರಾತ್ರಿ ಧರಣಿ
ಮಂಡ್ಯ:ಕಬ್ಬಿಗೆ ವೈಜ್ಞಾನಿಕ ಬೆಲೆ ಹಾಗೂ ಹಾಲಿನ ದರ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಕ್ಕರೆನಾಡು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಳೆದ 104 ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ರೈತರ ಬಗ್ಗೆ ತಲೆಕೆಡಿಸಿಕೊಳ್ಳದ ಹಿನ್ನೆಲೆ ರೈತರ ಹೋರಾಟ ತೀವ್ರಗೊಂಡಿದೆ. ಆಮರಣಾಂತ ಉಪವಾಸ ಸತ್ಯಾಗ್ರಹವನ್ನೂ ರೈತರು ಆರಂಭಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಉಪವಾಸ ಕುಳಿತ ರೈತರ ಆರೋಗ್ಯದಲ್ಲಿ ಏರುಪೇರಾಗಿ ಓರ್ವ ರೈತ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಐವರು ರೈತರಿಂದ ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದು, ರಾಮಕೃಷ್ಣ ಎಂಬ ರೈತನನ್ನು ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ನಾಲ್ವರು ರೈತರ ಆರೋಗ್ಯದಲ್ಲಿಯೂ ಏರುಪೇರಾಗಿದೆ. ಉಪವಾಸ ನಿರತ ರೈತರ ಆರೋಗ್ಯ ತಪಾಸಣೆಯನ್ನು ಡಿಹೆಚ್ಓ ಡಾ.ಧನಂಜಯ್ ನೇತ್ವತದ ವೈದ್ಯರ ತಂಡ ಮಾಡುತ್ತಿದೆ.
ಉಪವಾಸನಿರತ ರೈತರಿಗೆ ಚಿಕಿತ್ಸೆ ಅಗತ್ಯವಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡುವಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ವೈದ್ಯರ ಸೂಚನೆ ಮೇರೆಗೆ ರೈತರ ಮನವೊಲಿಕೆಗೆ ಪೊಲೀಸರು ಪ್ರಯತ್ನಿಸಿದರು. ಚಿಕಿತ್ಸೆ ಅಗತ್ಯವಿದ್ದು, ಉಪವಾಸ ಕೈ ಬಿಡಿ ಎಂದು ರೈತರಲ್ಲಿ ಮನವಿ ಮಾಡಿದರು. ಪೊಲೀಸರ ಮನವಿಗೂ ಕ್ಯಾರೇ ಎನ್ನದೆ ಅಧಿಕಾರಿಗಳ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬೇಡಿಕೆ ಈಡೇರಿಸುವಂತೆ ಕಬ್ಬು ಬೆಳೆಗಾರರ ಆಗ್ರಹ.. ಮಂಡ್ಯದಲ್ಲಿ ರೈತರ ಬೃಹತ್ ಪ್ರತಿಭಟನೆ