ಸರ್ಕಾರಿ ವಿವಾಹ ಕಾರ್ಯಕ್ರಮ: ಮೇಕಪ್ ಕಿಟ್‌ನಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆ ಪತ್ತೆ!
ಝಬುವಾ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಸರ್ಕಾರಿ ವಿವಾಹ ಕಾರ್ಯಕ್ರಮದಲ್ಲಿ ಕುಟುಂಬ ಯೋಜನಾ ಸಾಮಗ್ರಿ ವಿತರಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ವಧುವಿನ ಕಿಟ್‌ನಲ್ಲಿ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆ ಪತ್ತೆಯಾಗಿದ್ದು, ಸಾರ್ವಜನಿಕ ಸಮಾರಂಭದಲ್ಲಿ ಇಂತಹ ಸಾಮಗ್ರಿ ವಿತರಿಸಿದ್ದಕ್ಕೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಝಬುವಾ ಜಿಲ್ಲೆಯ ತಾಂಡ್ಲ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸೋಮವಾರ ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಕನ್ಯಾ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಾಮೂಹಿಕ ವಿವಾಹ ಸಮಾರಂಭದಲ್ಲಿ 292 ಜೋಡಿಗಳಿಗೆ ಮದುವೆ ಮಾಡಲಾಗಿದೆ. ಆದರೆ, ವಧುವಿಗೆ ನೀಡಿದ ಮೇಕಪ್ ಕಿಟ್ಗಳಲ್ಲಿ ಕುಟುಂಬ ಯೋಜನಾ ಮಾತ್ರೆಗಳು ಹಾಗೂ ಇತರ ಸಾಮಗ್ರಿಗಳನ್ನು ಪತ್ತೆಯಾಗಿವೆ. ಇದನ್ನು ನೋಡಿದ ತಕ್ಷಣವೇ ಕುಟುಂಬಸ್ಥರು ಬೆಚ್ಚಿಬಿದ್ದಾರೆ. ಮದುವೆ ಸಮಾರಂಭದಲ್ಲೇ ಇಂತಹ ವಸ್ತು ನೀಡುವುದು ಸರಿಯಲ್ಲ ಎಂದು ಸಂಬಂಧಿಕರು ಪ್ರತಿಭಟನೆ ಸಹ ನಡೆಸಿದ್ದಾರೆ.
ಇದೇ ವೇಳೆ, ಕುಟುಂಬ ಯೋಜನೆಗೆ ಸಂಬಂಧಿಸಿದ ಸಾಮಾಗ್ರಿಗಳನ್ನು ಆರೋಗ್ಯ ಇಲಾಖೆಯಿಂದ ನೀಡಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಭೂರಸಿಂಗ್ ರಾವತ್ ಮಾತನಾಡಿ, ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಮೇಕಪ್ ಕಿಟ್‌ನಲ್ಲಿ ನೀಡಲಾದ ವಸ್ತುಗಳು ಕುಟುಂಬ ಯೋಜನೆ ಕಾರ್ಯಕ್ರಮದ ಭಾಗವಾಗಿದೆ. ವಿವಾಹಿತ ದಂಪತಿಗಳಿಗೆ ಈ ಬಗ್ಗೆ ಅರಿವು ಮೂಡಿಸುವುದು ಜವಾಬ್ದಾರಿಯಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಮೇಕಪ್ ಕಿಟ್‌ನಲ್ಲಿ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆ ನೀಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.
ಇದನ್ನೂ ಓದಿ:ಕ್ಯಾನ್ಸರ್ನಿಂದ ಮೃತಪಟ್ಟ ಸ್ನೇಹಿತ; ದುಃಖ ತಾಳಲಾರದೆ ಚಿತೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ!