ಪ್ರಿಯಾಂಕಾ ಗಾಂಧಿ ದೋಸೆ ಹಾಕಿ ಸಂತೋಷಪಟ್ಟರು : ಹೋಟೆಲ್ ಮಾಲೀಕನ ಸಂದರ್ಶನ - ಈಟಿವಿ ಭಾರತ್ ಕನ್ನಡ ಸುದ್ದಿ
ಮೈಸೂರು: ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ನಮ್ಮ ಹೋಟೆಲ್ಗೆ ಬಂದಾಗ ನನಗೆ ನಂಬಲು ಆಗಲಿಲ್ಲ. ಅವರು ಜನರೊಂದಿಗೆ ಕುಳಿತು ದೋಸೆ ತಿಂದರು. ಹಾಗೂ ನಮ್ಮ ದೋಸೆ ಕಿಚನ್ಗೆ ಬಂದು ಸ್ವತಃ ದೋಸೆ ಹಾಕಿದರು. ಆ ಸಂದರ್ಭದಲ್ಲಿ ನಮ್ಮೊಂದಿಗೆ ಅವರ ಅನುಭವ ಹಂಚಿಕೊಂಡರು. ಅದನ್ನು ಮರೆಯಲು ಸಾಧ್ಯವಿಲ್ಲ ಎಂದು ಮೈಲಾರಿ ದೋಸೆ ಹೋಟೆಲ್ ಮಾಲೀಕ ಲೋಕೇಶ್ ಅವರು ಪ್ರಿಯಾಂಕಾ ಗಾಂಧಿ ತಮ್ಮ ಹೋಟೆಲ್ಗೆ ಬಂದು ಅಲ್ಲಿ ಹೇಗೆ ನಡೆದುಕೊಂಡರು ಎಂಬ ಬಗ್ಗೆ ತಮ್ಮ ಅನುಭವವನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
ಮೈಸೂರಿನಲ್ಲಿ ಕಳೆದ ರಾತ್ರಿ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ ಪ್ರಿಯಾಂಕಾ ಗಾಂಧಿ, ಬುಧವಾರ ಬೆಳಗ್ಗೆ ಮೈಸೂರಿನ ಅಗ್ರಹಾರದಲ್ಲಿರುವ ಮೈಲಾರಿ ಹೋಟೆಲ್ಗೆ ಆಗಮಿಸಿ, ದೋಸೆ ಹಾಕಿದ್ರು. ಜೊತೆಗೆ ದೋಸೆ, ಇಡ್ಲಿ ತಿಂದು ಸಂತೋಷಪಟ್ಟರು ಎಂಬ ಬಗ್ಗೆ ಹೋಟೆಲ್ ಮಾಲೀಕ ಲೋಕೇಶ್ ವಿವರಿಸಿದರು.
ಇಂದು ಬೆಳಗ್ಗೆ ಡಿ ಕೆ ಶಿವಕುಮಾರ್ ಸರ್ ಫೋನ್ ಮಾಡಿ 10 ನಿಮಿಷದಲ್ಲಿ ಪ್ರಿಯಾಂಕಾ ಗಾಂಧಿ ನಿಮ್ಮ ಹೋಟೆಲ್ಗೆ ಬರುತ್ತಾರೆ ಎಂದರು. ಬನ್ನಿ ಸಾರ್ ಎಂದೆ. ಆದರೆ ಇದನ್ನು ಊಹಿಸಿಕೊಳ್ಳಲು ಆಗಲಿಲ್ಲ. ಆದರೆ ಡಿ ಕೆ ಶಿವಕುಮಾರ್ ಸರ್ ಫೋನ್ ಮಾಡಿದ್ದರಿಂದ ಭರವಸೆ ಬಂತು. ತಕ್ಷಣ ಬಂದೇ ಬಿಟ್ಟರು. ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸುವ ವ್ಯವಸ್ಥೆ ಮಾಡಿದೆವು. ಆದರೆ ಅವರು ಒಪ್ಪಲಿಲ್ಲ. ಎಲ್ಲರ ಜೊತೆ ಬೆರೆತು ದೋಸೆ ಹಾಗೂ ಇಡ್ಲಿ ತಿಂದರು.
ಅನಂತರ ದೋಸೆ ಮಾಡುವ ಕಿಚನ್ಗೆ ಬಂದು ತಾವು ದೋಸೆ ಹಾಕಬೇಕೆಂದು ಕೇಳಿದರು. ದೋಸೆ ಹಾಕುವುದನ್ನು ತೋರಿಸಿಕೊಟ್ಟೆ. ಅವರು ಸಹ ದೋಸೆ ಹಾಕಿದರು. ಈ ಸಂದರ್ಭದಲ್ಲಿ ಅವರು ತಮ್ಮ ಅನುಭವವನ್ನು ಹಂಚಿಕೊಂಡು, ನನ್ನ ಮಗಳಿಗೆ ದೋಸೆ ಎಂದರೆ ತುಂಬಾ ಇಷ್ಟ ಎಂದು ಹೇಳಿದರು. ಅನಂತರ ಚಿಕ್ಕದಾದ ಕಿಚನ್ನಲ್ಲಿ ತುಂಬಾ ಸೆಕೆ ಇದ್ದರೂ ಹೋಟೆಲ್ ಚೆನ್ನಾಗಿ ಇದೆ ಎಂದು ಹೇಳಿದ್ರು. ನನ್ನ ಹೆಂಡತಿ ಹಾಗೂ ಮಗಳೊಂದಿಗೆ ಆತ್ಮೀಯವಾಗಿ ಮಾತನಾಡಿದರು. ಅವರ ಸರಳತೆ ನೋಡಿ ನನಗೂ ಆಶ್ಚರ್ಯವಾಯಿತು ಹಾಗೂ ಸಂತೋಷವೂ ಸಹ ಆಯಿತು ಎಂದು ಹೋಟೆಲ್ ಮಾಲೀಕ ಲೋಕೇಶ್ ಈಟಿವಿ ಭಾರತಕ್ಕೆ ವಿವರಣೆ ನೀಡಿದರು.
ಇದನ್ನೂ ಓದಿ :ಮೈಸೂರು: ಹೋಟೆಲ್ನಲ್ಲಿ ದೋಸೆ ಸವಿದ ಪ್ರಿಯಾಂಕಾ ಗಾಂಧಿ..!