ಲೂಧಿಯಾನ ಗ್ಯಾಂಗ್ಸ್ಟರ್, ಪೊಲೀಸರ ನಡುವೆ ಗುಂಡಿನ ದಾಳಿ : ಇಬ್ಬರು ಆರೋಪಿಗಳು ಫಿನಿಶ್.. - etv bharat kannada
Published : Nov 29, 2023, 10:41 PM IST
ಲೂಧಿಯಾನ:ಪಂಜಾಬ್ನ ಲೂಧಿಯಾನದ ದೋರಾಹಾದ ಟಿಬ್ಬಾ ಬ್ರಿಡ್ಜ್ ಎಂಬ ಪ್ರದೇಶದಲ್ಲಿ ಪೊಲೀಸರು ಮತ್ತು ಗ್ಯಾಂಗ್ಸ್ಟರ್ಗಳ ನಡುವೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗ್ಯಾಂಗ್ಸ್ಟರ್ಗಳು ಸಾವನ್ನಪ್ಪಿದ್ದಾರೆ. ಎನ್‌ಕೌಂಟರ್ ವೇಳೆ ಓರ್ವ ಪೊಲೀಸ್ ಅಧಿಕಾರಿ ಸುಖದೀಪ್ ಎಂಬುವವರು ಗಾಯಗೊಂಡಿದ್ದಾರೆ ಎಂದು ಲೂಧಿಯಾನ ಪೊಲೀಸ್ ಆಯುಕ್ತ ಕುಲದೀಪ್ ಚಹಾಲ್ ತಿಳಿಸಿದ್ದಾರೆ.
ಉದ್ಯಮಿಯೊಬ್ಬರನ್ನು ಅಪಹರಿಸಿದ ಪ್ರಕರಣ ಮತ್ತು ಗುಂಡಿಕ್ಕಿ ವ್ಯಕ್ತಿಯೊಬ್ಬನ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳ ಪೈಕಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಉಳಿದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದರು. ದೋರಾಹಾದ ಟಿಬ್ಬಾ ಬ್ರಿಡ್ಜ್ ಎಂಬ ಪ್ರದೇಶದಲ್ಲಿ ಆರೋಪಿಗಳು ಇರುವುದಾಗಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಅಲ್ಲಿಗೆ ತೆರಳಿದ ಪೊಲೀಸರು ಆ ಪ್ರದೇಶವನ್ನು ಸುತ್ತುವರೆದಿದ್ದರು.
ಇದರ ಮಾಹಿತಿ ಪಡೆದ ಇಬ್ಬರು ಆರೋಪಿಗಳು ಏಕಾಏಕಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಬರೋಬ್ಬರಿ 8:20 ನಿಮಿಷಗಳ ಕಾಲ 15 ರಿಂದ 20 ಸುತ್ತುಗಳ ಫೈರಿಂಗ್ ನಡೆದಿದೆ. ಈ ವೇಳೆ, ಇಬ್ಬರು ಆರೋಪಿಗಳು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬಿಎಸ್ಎಫ್ ಪೋಸ್ಟ್ಗಳ ಮೇಲೆ ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ: ಯೋಧ ಸೇರಿ ಐವರಿಗೆ ಗಾಯ