ಚಿಕ್ಕಮಗಳೂರು: ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ - ವಿಡಿಯೋ
Published : Dec 11, 2023, 7:44 PM IST
|Updated : Dec 11, 2023, 8:07 PM IST
ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಲೇ ಇದೆ. ಜಿಲ್ಲೆಯ ಎನ್ಆರ್ ತಾಲೂಕಿನ ಕುಸುಬೂರು ಗ್ರಾಮದ ಹೊಸ ಕೊಪ್ಪದ ನಿವೃತ್ತ ಯೋಧ ಹಾಗೂ ಪ್ರಗತಿಪರ ಕೃಷಿಕ ಯತಿರಾಜ್ ಅವರ ಮನೆ ಸಮೀಪದ ಕೆರೆ ಹಾಗೂ ಪಕ್ಕದಲ್ಲಿ ಬರುವ ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಹಿಂಡು ಈಜಾಡಿಕೊಂಡು ಜಲ ಕ್ರೀಡೆ ಆಡಿವೆ.
ಅರ್ಧ ಗಂಟೆಗೂ ಹೆಚ್ಚು ನೀರಿನಲ್ಲಿ ಕಾಲ ಕಳೆದಿರುವ ಕಾಡಾನೆಗಳು ನಂತರ ಕಾಡಿಗೆ ಪ್ರಯಾಣ ಬೆಳೆಸಿವೆ. ಕಳೆದ ವರ್ಷ ಇದೇ ಕೆರೆಗೆ 20ಕ್ಕೂ ಹೆಚ್ಚು ಕಾಡಾನೆಗಳು ಬಂದಿದ್ದವು. ಈ ವರ್ಷ ಆನೆ ಮರಿಗಳು ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಕಾಡಾನೆಗಳು ಬಂದಿವೆ. ಲಕ್ಕವಳ್ಳಿ ವನ್ಯಜೀವಿ ಅರಣ್ಯ ವ್ಯಾಪ್ತಿಯ ಭದ್ರಾ ಹಿನ್ನೀರಿನ ಅಕ್ಕ-ಪಕ್ಕದ ಗ್ರಾಮಗಳಾದ ಗುಳದಮನೆ, ಹಾಗಲಮನೆ, ಸಾತ್ಕೋಳಿ ಕಡೆಯಿಂದ ಕಾಡಾನೆಗಳು ಬರುತ್ತಿವೆ.
ಇದರಿಂದ ನಮ್ಮ ಬೆಳೆಗಳು ನಾಶವಾಗುತ್ತಿವೆ. ಕಳೆದ ಕೆಲವು ದಿನಗಳಿಂದ ಕೊರಲ ಕೊಪ್ಪ, ಕೆ.ಕಣಬೂರು, ಸಾತ್ಕೋಳಿ, ಮುಂಡಗೋಡು ಭಾಗದಲ್ಲಿ ಕಾಡಾನೆಗಳು ಭತ್ತದ ಗದ್ದೆ, ಅಡಕೆ ತೋಟಗಳಿಗೆ ದಾಳಿ ಇಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದರು. ಇದೀಗ ಕೆರೆಯಲ್ಲಿ ಕಾಡಾನೆಗಳು ಕಾಣಿಸಿಕೊಂಡಿರುವುದು ರೈತರಿಗೆ ಆತಂಕ ಮೂಡಿಸಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ :ಕೈಯಲ್ಲಿ ಚಪ್ಪಲಿ ಹಿಡಿದು ಕಾಡಾನೆ ಓಡಿಸಲು ಯತ್ನಿಸಿದ ಯುವಕ: ವಿಡಿಯೋ ವೈರಲ್