ಕಾಫಿನಾಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಕಾಡಾನೆಗಳ ಹಿಂಡು.. ಬೆಳೆನಾಶಕ್ಕೆ ಬೇಸತ್ತ ರೈತರು
Published : Oct 9, 2023, 5:43 PM IST
ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾಗೂ ಮನುಷ್ಯರ ನಡುವಿನ ಸಂಘರ್ಷ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಪ್ರತಿನಿತ್ಯ ಕಾಡಾನೆಗಳ ಹಾವಳಿಗೆ ಮಲೆನಾಡು ಭಾಗದ ಜನರು ಬೇಸತ್ತು ಹೋಗಿದ್ದು, ಅರಣ್ಯ ಇಲಾಖೆಯ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ.
ಅದೇ ರೀತಿ ಇಂದು ಕೂಡ ಕಾಫಿನಾಡಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಪರೇಡ್ ನಡೆಯುತ್ತಿದೆ. 7 ಕಾಡಾನೆಗಳ ಹಿಂಡಿನಿಂದ ತೋಟದಲ್ಲಿ ದಾಂಧಲೆ ಮುಂದುವರೆದಿದೆ. ಕಾಫಿ, ಮೆಣಸು, ಏಲಕ್ಕಿ, ಬಾಳೆ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ.
ಚಿಕ್ಕಮಗಳೂರು ತಾಲೂಕಿನ ಕಣತಿ ಗ್ರಾಮದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಕಳೆದೊಂದು ತಿಂಗಳಿನಿಂದ ಇವುಗಳ ಸಂಚಾರದಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಆನೆಗಳ ಹಿಂಡನ್ನು ಕಾಡಿಗೆ ಓಡಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ನಿರಂತರವಾಗಿ ಕಾಫಿ, ಭತ್ತದ ಗದ್ದೆಯನ್ನ ನಾಶ ಮಾಡಲು ಕಾಡಾನೆಗಳ ಹಿಂಡು ಮುಂದಾಗುತ್ತಿದೆ. ನಿರಂತರವಾಗಿ ಈ ಹಾವಳಿಯಿಂದ, ಲಕ್ಷಾಂತರ ಮೌಲ್ಯದ ಬೆಳೆಗಳು ಹಾಳಾಗುತ್ತಿವೆ.
ಅರೇನೂರು, ಕಣತಿ, ಬೆಟ್ಟದಮರಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಕಾಟ ಮಿತಿ ಮೀರಿ ಹೋಗಿದ್ದು, ಆಲ್ದೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಂಧಲೆಗೆ ಗ್ರಾಮಸ್ಥರು ಸುಸ್ತಾಗಿದ್ದಾರೆ. ಪಟಾಕಿ ಸಿಡಿಸಿದರೂ ಕಾಡಾನೆಗಳು ಜಗ್ಗದ ರೀತಿಗೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಇನ್ನಾದರೂ ಈ ಭಾಗದಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಶಾಶ್ವತ ಕ್ರಮ ತೆಗೆದುಕೊಳ್ಳಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ:ಕಾಫಿನಾಡಲ್ಲಿ ಕಾಡಾನೆಗಳ ಪರೇಡ್: ಕಾಫಿ, ಅಡಕೆ, ಬಾಳೆ ಬೆಳೆ ನಾಶ