ಚಿಕ್ಕಮಗಳೂರು: ಅರಣ್ಯ ಸಿಬ್ಬಂದಿಯನ್ನು ಅಟ್ಟಿಸಿಕೊಂಡು ಬಂದ ಕಾಡಾನೆ
ಚಿಕ್ಕಮಗಳೂರು :ಮೂಡಿಗೆರೆ ತಾಲೂಕಿನ ಮೇಗೂರಿನ ಅತ್ತಿಗುಣಿ ಹರದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭದಲ್ಲಿ ಆನೆಯೊಂದು ಅರಣ್ಯ ಸಿಬ್ಬಂದಿಯನ್ನು ಅಟ್ಟಿಸಿಕೊಂಡು ಬಂದಿದೆ. ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಲೆಮನೆ, ಮೇಗೂರು, ಆಲೇಕಾನ್ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಆನೆ ಕಾರ್ಯಪಡೆಯ ಉಪವಲಯ ಅರಣ್ಯಾಧಿಕಾರಿ ಸುಹಾಸ್, ಕಿರಣ್ ಕುಮಾರ್, ದೀಕ್ಷಿತ್, ಕಾರ್ತಿಕ್, ಅಶ್ವಿನ್, ಕರ್ಣ, ಗಸ್ತು ಅಧಿಕಾರಿ ಪರಮೇಶ್ ಗ್ರಾಮಸ್ಥರೊಂದಿಗೆ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು. ಈ ವೇಳೆ ಮೇಗೂರಿನ ಅತ್ತಗುಣಿ ಸಮೀಪ ಕಾಡಾನೆಯೊಂದು ಅಟ್ಟಿಸಿಕೊಂಡು ಬಂದಿದೆ.
ಕಾಡಾನೆಗಳನ್ನು ಕಾಡಿಗಟ್ಟಿದರೂ ಮತ್ತೆ ಮತ್ತೆ ಅವುಗಳು ಊರಿನತ್ತ ಬರುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ಮಲೆಮನೆ, ಮೇಗೂರು, ಆಲೇಕಾನ್ ಮುಂತಾದೆಡೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹೀಗಾಗಿ, ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರತಿನಿತ್ಯ ತೋಟಗಳಿಗೆ ಬರುವ ಆನೆಗಳ ಹಿಂಡು ಕಾಫಿ, ಏಲಕ್ಕಿ, ಬಾಳೆ, ಅಡಿಕೆಗಳನ್ನು ತುಳಿದು ನಾಶ ಮಾಡುತ್ತಿದ್ದು, ರೈತರು ಕಂಗಲಾಗಿದ್ದಾರೆ. ನಿರಂತರ ದಾಳಿಯಿಂದ ಲಕ್ಷಾಂತರ ಮೌಲ್ಯದ ಬೆಳೆಗಳು ನಾಶವಾಗುತ್ತಿವೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Elephant Task Force: ಕಾಡಾನೆ ದಾಳಿ ತಪ್ಪಿಸಲು ವಿಶೇಷ ಕಾರ್ಯಪಡೆ ರಚನೆ