ಚಾರ್ಜಿಂಗ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ: ಮನೆ ಬೆಂಕಿಗಾಹುತಿ - ಈಟಿವಿ ಭಾರತ ಕನ್ನಡ ನ್ಯೂಸ್
ಮಂಡ್ಯ :ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಚಾರ್ಜಿಂಗ್ ಹಾಕಿದ್ದ ವೇಳೆ ಬ್ಯಾಟರಿ ಸ್ಫೋಟಗೊಂಡು ಮನೆ ಸುಟ್ಟು ಕರಕಲಾಗಿರುವ ಘಟನೆ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮುತ್ತುರಾಜ್ ಎಂಬುವವರ ಮನೆಯಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳಾದ ಟಿವಿ, ಫ್ರಿಡ್ಜ್ ಹಾಗೂ ಧವಸ ಧಾನ್ಯಗಳು ಸೇರಿದಂತೆ ಸುಮಾರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಮುತ್ತುರಾಜ್ ಅವರು ಮದ್ದೂರಿನ ಪ್ರವಾಸಿ ಮಂದಿರದ ಬಳಿ ಇರುವ E -ROUTE ಕಂಪನಿಯಲ್ಲಿ ಎಲೆಕ್ಟ್ರಿಕಲ್ ಬೈಕೊಂದನ್ನು ಕಳೆದ 7 ತಿಂಗಳ ಹಿಂದೆ ಖರೀದಿಸಿದ್ದರು. ಎಂದಿನಂತೆ ತಮ್ಮ ಮನೆಯ ಒಳಗೆ ನಿಲ್ಲಿಸಿದ್ದ ಬೈಕ್ಗೆ ಚಾರ್ಜಿಂಗ್ ಹಾಕಿದ್ದಾರೆ. ಚಾರ್ಜ್ಗೆ ಹಾಕಿದ ಕೆಲ ಹೊತ್ತಿನಲ್ಲೇ ಬೈಕ್ ಇದ್ದಕ್ಕಿದ್ದಂತೆ ಸ್ಪೋಟಗೊಂಡಿದೆ. ಇದರಿಂದ ಬೆಂಕಿಯ ಕೆನ್ನಾಲಿಗೆ ಮನೆ ತುಂಬೆಲ್ಲ ಹರಡಿದೆ. ಇದರ ಪರಿಣಾಮ ಟಿವಿ, ಫ್ರಿಡ್ಜ್, ಡೈನಿಂಗ್ ಟೇಬಲ್, ಎರಡು ಮೊಬೈಲ್ ಹಾಗೂ ಮನೆಯಲ್ಲಿ ದಾಸ್ತಾನು ಇರಿಸಿದ್ದ ಧವಸ ಧಾನ್ಯಗಳು ಬೆಂಕಿಗೆ ಆಹುತಿಯಾಗಿವೆ.
ಈ ವೇಳೆ ಮುತ್ತುರಾಜ್ ಮತ್ತು ಕುಟುಂಬದವರು ಮನೆಯಿಂದ ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಕ್ಕ ಪಕ್ಕದ ನಿವಾಸಿಗಳು ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ :ಚಾರ್ಜಿಂಗ್ ವೇಳೆ ಬ್ಯಾಟರಿ ಸ್ಫೋಟಗೊಂಡು ಬೆಂಕಿಗಾಹುತಿಯಾದ ಎಲೆಕ್ಟ್ರಿಕ್ ಬೈಕ್