ಏಕಾಏಕಿ ಹೊತ್ತಿ ಉರಿದ ಎಲೆಕ್ಟ್ರಿಕಲ್ ಬೈಕ್.. ವಿಡಿಯೋ - ಬೈಕ್ನ ಬ್ಯಾಟರಿಯಲ್ಲಿ ಬೆಂಕಿ
ಕೋಲಾರ : ಏಕಾಏಕಿ ಎಲೆಕ್ಟ್ರಿಕಲ್ ಬೈಕ್ ಹೊತ್ತಿ ಉರಿದಿರುವ ಘಟನೆ ಇಲ್ಲಿನ ಧರ್ಮರಾಯ ನಗರದಲ್ಲಿ ಜರುಗಿದೆ. ಈ ಬೈಕ್ ನಗರದ ಹರೀಶ್ ಎಂಬುವರಿಗೆ ಸೇರಿದೆ. ಖಾಸಗಿ ಕಂಪನಿಗೆ ಸೇರಿದ ಎಲೆಕ್ಟ್ರಿಕಲ್ ಬೈಕ್ ಇದಾಗಿದ್ದು, ಇವತ್ತು ಬೆಳಗ್ಗೆ ಹರೀಶ್ ಬೈಕ್‌ನಲ್ಲಿ ಹೋಗುವಾಗ ಬ್ಯಾಟರಿಯಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ನಂತರ ಬೈಕ್ನಿಂದ ಎಲೆಕ್ಟ್ರಿಕಲ್ ಬ್ಯಾಟರಿಯನ್ನು ಹೊರತೆಗೆದು ಬೆಂಕಿ ನಂದಿಸಲು ಮುಂದಾಗಿದ್ದಾರೆ.
ಆದರೆ, ಕ್ಷಣಾರ್ಧದಲ್ಲಿ ಬೈಕ್ನ ಬ್ಯಾಟರಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ದ್ವಿಚಕ್ರ ವಾಹನ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಳೆದ ಒಂದು ವರ್ಷದ ಹಿಂದೆ ಕೋಲಾರದ ಆರ್ಟಿಓ ಕಚೇರಿ ಬಳಿಯಿರುವ ಖಾಸಗಿ ಕಂಪನಿಯಲ್ಲಿ ಹರೀಶ್ ಅವರು ಸುಮಾರು 1.10 ಲಕ್ಷ ರೂ.ಗಳನ್ನು ನೀಡಿ ಎಲೆಕ್ಟ್ರಾನಿಕ್ ಬೈಕ್ ಅನ್ನು ಖರೀದಿ ಮಾಡಿದ್ರು. ಬೈಕ್‌ನಲ್ಲಿ ಇದುವರೆಗೂ ಯಾವುದೇ ರೀತಿಯ ತೊಂದರೆ ಕಾಣಿಸಿರಲಿಲ್ಲ. ಆದ್ರೆ ಇವತ್ತು ಬೈಕ್‌ನಲ್ಲಿ ದಿಢೀರನೆ ಹೊಗೆ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ.
ಪರಿಣಾಮ ಸ್ಥಳದಲ್ಲಿದ್ದವರು ಭಯಭೀತರಾಗಿದ್ದಾರೆ. ಸರ್ಕಾರ ಇಂಧನ ವಾಹನಗಳಿಗೆ ಪರ್ಯಾಯವಾಗಿ ಮತ್ತು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಾನಿಕ್ ಬೈಕ್‌ಗಳಿಗೆ ಉತ್ತೇಜನ ನೀಡುತ್ತಿದೆ. ಆದರೆ, ದೇಶದ ಹಲವಾರು ಕಡೆಗಳಲ್ಲಿ ಎಲೆಕ್ಟ್ರಾನಿಕ್ ಬೈಕ್ ಸೇರಿದಂತೆ ಕಾರುಗಳಲ್ಲಿ ಹೊಗೆ ಕಾಣಿಸಿಕೊಂಡು ಸುಟ್ಟು ಕರಕಲಾಗುತ್ತಿರುವುದರಿಂದ, ಎಲೆಕ್ಟ್ರಾನಿಕ್ ವಾಹನಗಳನ್ನು ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ:ಹಾವೇರಿ: ಕ್ಯಾಂಡಲ್ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಡ.. ಐವರಿಗೆ ಗಾಯ