S Jaishankar: ದಲಿತರ ಮನೆಯಲ್ಲಿ ನೆಲದ ಮೇಲೆ ಕುಳಿತು ಉಪಾಹಾರ ಸೇವಿಸಿದ ವಿದೇಶಾಂಗ ಸಚಿವ ಜೈಶಂಕರ್: ವಿಡಿಯೋ - ವಾರಾಣಸಿಯಲ್ಲಿ ಎಸ್ ಜೈಶಂಕರ್
ವಾರಾಣಸಿ:ರಾಜತಾಂತ್ರಿಕ ಪ್ರಬುದ್ಧತೆ ಮೆರೆದು ಹಲವು ಪ್ರಬಲ ರಾಷ್ಟ್ರಗಳೊಂದಿಗೆ ಭಾರತವನ್ನು ಸಂಧಿಸುವ ಕೆಲಸ ಮಾಡುತ್ತಿರುವ ಚತುರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ನಡೆಯೊಂದು ಮೆಚ್ಚುಗೆ ಮತ್ತು ಗಮನ ಸೆಳೆದಿದೆ. ಉತ್ತರಪ್ರದೇಶದಲ್ಲಿರುವ ಅವರು ಇಂದು ವಾರಾಣಸಿಗೆ ಭೇಟಿ ನೀಡಿದ್ದು, ಇಲ್ಲಿನ ಬಿಜೆಪಿಯ ದಲಿತ ಮೋರ್ಚಾ ಅಧ್ಯಕ್ಷೆ ಸುಜಾತಾ ಎಂಬುವರ ಚಿಕ್ಕ ಮನೆಯಲ್ಲಿ ಉಪಾಹಾರ ಸೇವನೆ ಮಾಡಿದ್ದಾರೆ. ಕೆಲವು ಅಧಿಕಾರಿಗಳು, ಬಿಜೆಪಿ ಮುಖಂಡರ ಜೊತೆ ನೆಲದ ಮೇಲೆಯೇ ಕುಳಿತು ಉಪಾಹಾರ ಸೇವಿಸುವ ಮೂಲಕ ಸರಳತೆ ಮೆರೆದರು. ಇದು ಆ ಕುಟುಂಬಸ್ಥರಿಗೂ ಸಂತಸ ತಂದಿದೆ.
ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಇಂದಿನಿಂದ 3 ದಿನಗಳ ಕಾಲ ವಾರಾಣಸಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಜಿ20 ರಾಷ್ಟ್ರಗಳ ಹಲವಾರು ಗಣ್ಯರು ಆಗಮಿಸಿದ್ದಾರೆ. ಶೃಂಗದಲ್ಲಿ ರಾಷ್ಟ್ರಗಳ ವಿದೇಶಾಂಗ ಸಚಿವರು ಮತ್ತು ಭಾರತದ ವಿದೇಶಾಂಗ ಸಚಿವರು ಮಹತ್ವದ ಚರ್ಚೆ ನಡೆಸಲಿದ್ದಾರೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಸಭೆಯ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.
ಎಸ್.ಜೈಶಂಕರ್ ಅವರು ಮೂಲ ಬಿಜೆಪಿಗರು ಅಲ್ಲದಿದ್ದರೂ, ಅವರಿಗಿರುವ ಅರ್ಹತೆಯ ಆಧಾರದ ಮೇಲೆ ವಿದೇಶಾಂಗ ಸಚಿವ ಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ:D K Shivakumar: ಉಜ್ಜಯಿನಿ ಮಹಾಕಾಳೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್- ವಿಡಿಯೋ