ಶಾಲೆಗೆ ಟೈಟ್ ಆಗಿ ಬಂದ ದೈಹಿಕ ಶಿಕ್ಷಕ.. ಗ್ರಾಮಸ್ಥರ ಆಕ್ರೋಶ
ವಿಜಯಪುರ: ವಿದ್ಯಾರ್ಥಿಗಳಿಗೆ ಉತ್ತಮ ಜೀವನ ರೂಪಿಸಬೇಕಾದ ಶಿಕ್ಷಕ ಬೆಳಗ್ಗೆಯೇ ಮದ್ಯ ಸೇವಿಸಿ ಶಾಲೆಗೆ ಬಂದ ಪ್ರಸಂಗ ವಿಜಯಪುರ ತಾಲೂಕಿನ ಕನ್ನೂರ ಗ್ರಾಮದಲ್ಲಿ ನಡೆದಿದೆ. ಕನ್ನೂರ ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಶಾಲೆ ಆರಂಭವಾಗುತ್ತಿದ್ದಂತೆ ಶಾಲೆಗೆ ದೈಹಿಕ ಶಿಕ್ಷಕ ಬಿ ಎಸ್ ರಾಠೋಡ್ ಅವರು ಬಂದಿದ್ದಾರೆ. ಅವರ ಪರಿಸ್ಥಿತಿ ಕಂಡ ಶಾಲೆಯ ಮಕ್ಕಳು ಕಕ್ಕಾಬಿಕ್ಕಿಯಾಗುವುದರ ಜತೆ ಗಾಬರಿಯಾಗಿ ಗ್ರಾಮದ ಕೆಲವರಿಗೆ ವಿಷಯ ಮುಟ್ಟಿಸಿದ್ದಾರೆ. ಶಾಲೆಗೆ ಆಗಮಿಸಿದ ಗ್ರಾಮದ ಮುಖಂಡರು ಶಿಕ್ಷಕನ ಪರಿಸ್ಥಿತಿ ನೋಡಿ ಆಕ್ರೋಶಗೊಂಡಿದ್ದಾರೆ.
ಮೊದಲು ಶಿಕ್ಷಕನನ್ನು ಮುಖ್ಯ ಶಿಕ್ಷಕರ ಕೋಣೆಗೆ ಕರೆದೊಯ್ದು ಶಿಕ್ಷಕನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಾಲೆಗೆ ಎಸ್ಡಿಎಂಸಿ ಅಧ್ಯಕ್ಷ, ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರು ಆಗಮಿಸಿ ಶಿಕ್ಷಕನ ವರ್ತನೆಗೆ ಬೇಸರ ವ್ಯಕ್ತಪಡಿಸಿದರು. 'ಶಾಲೆ ಮಕ್ಕಳ ಭವಿಷ್ಯವನ್ನು ರೂಪಿಸಿ ಸಮಾಜಕ್ಕೆ ಅವರಿಂದ ಉತ್ತಮ ಕೊಡುಗೆ ಕೊಡಿಸಬೇಕಾದ ಶಿಕ್ಷಕನೇ ಈ ರೀತಿ ಶಾಲೆಗೆ ಮದ್ಯ ಸೇವಿಸಿ ಬರುತ್ತಿದ್ದರೆ, ಮಕ್ಕಳ ಮೇಲೆ ಯಾವ ಪರಿಣಾಮ ಬೀರಬಲ್ಲದು ಎಂಬುದನ್ನು ಉಳಿದ ಶಿಕ್ಷಕರು ಊಹಿಸಿಕೊಳ್ಳಬೇಕು. ತಕ್ಷಣ ಮದ್ಯ ಸೇವಿಸಿ ಬಂದ ಶಿಕ್ಷಕನನ್ನು ತಕ್ಷಣ ಅಮಾನತುಗೊಳಿಸಬೇಕು. ಶಾಲೆಗೆ ಖುದ್ದು ಡಿಡಿಪಿಐ ಭೇಟಿ ನೀಡಬೇಕು' ಎಂದು ಗ್ರಾಮಸ್ಥರು ಆಗ್ರಹಿಸಿದರು.
ಇವರು ಆಲ್ಕೋಹಾಲ್ ಸೇವಿಸಿದ್ದರೆ ಕಂಡುಹಿಡಿಯುವ ಉದ್ದೇಶದಿಂದ ಬ್ಲಡ್ ಸ್ಯಾಂಪಲ್ನ್ನು ಸರ್ಕಾರಿ ಹಾಸ್ಪಿಟಲ್ನ ಲ್ಯಾಬೋರೇಟರಿಗೆ ಕೊಡಬೇಕಾಗುತ್ತದೆ. ಮೊದಲು ಟೆಸ್ಟಿಂಗ್ ಮಾಡಬೇಕು. ಈ ಬಗ್ಗೆ ಒಂದು ಕಂಪ್ಲೆಂಟ್ ಕೊಡಿ ಎಂದು ಮುಖ್ಯೋಪಾಧ್ಯಾಯರು ತಿಳಿಸಿದರು.
ಓದಿ :ಪಕ್ಕದ ನಿವಾಸದಿಂದ ಮನೆಗೆ ಬರಲು ತಡ ಮಾಡಿದ ಪತಿ: ಮನನೊಂದು ಪತ್ನಿ ಆತ್ಮಹತ್ಯೆ