ಕುಡಿದ ಅಮಲಿನಲ್ಲಿ ಬೆಳ್ಳೂರಿನ ಸಂತೆಗೆ ಜೆಸಿಬಿ ನುಗ್ಗಿಸಿದ ಚಾಲಕ.. ಜನರಿಂದ ಧರ್ಮದೇಟು -ವಿಡಿಯೋ - ಪಾನಮತ್ತ ಚಾಲಕ
Published : Nov 13, 2023, 11:01 PM IST
ಮಂಡ್ಯ: ಮದ್ಯದ ಅಮಲಿನಲ್ಲಿ ಮನ ಬಂದಂತೆ ಅಡ್ಡಾದಿಡ್ಡಿ ಜೆಸಿಬಿ ಚಲಾಯಿಸಿ ಅವಾಂತರ ಸೃಷ್ಟಿಸಿದ ಚಾಲಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಸೋಮವಾರ ಸಾಯಂಕಾಲ ನಡೆದಿದೆ. ಜೆಸಿಬಿ ಚಾಲಕ ಬಿಹಾರ ಮೂಲದ ರಾಜ್ಕುಮಾರ್ ಎಂಬಾತನಾಗಿದ್ದು, ಗಂಭೀರವಾಗಿ ಗಾಯಗೊಂಡ ಆತನಿಗೆ ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಜೆಸಿಬಿಯು ತಮಕೂರಿನ ಕುಣಿಗಲ್ ಮೂಲದವರಿಗೆ ಸೇರಿದೆ ಎಂದು ತಿಳಿದು ಬಂದಿದೆ.
ಇಂದು ಸಂಜೆ 6.15 ರ ಸಮಯದಲ್ಲಿ ರಾಜ್ ಕುಮಾರ್ ಏಕಾಏಕಿ ಬೆಳ್ಳೂರು ವಾರದ ಸಂತೆ ಮಾರ್ಗದಲ್ಲಿ ಬೀದಿ ಬದಿ ಅಂಗಡಿಗಳು, ತರಕಾರಿ ಅಂಗಡಿ ಮೇಲೆ ಜೆಸಿಬಿ ನುಗ್ಗಿಸಿದ್ದಾನೆ. ಟೀ ಹೋಟೇಲ್ ಸೇರಿ ತಳ್ಳುವ ಗಾಡಿಗಳು ಹಾನಿಗೊಳಗಾಗಿವೆ. ಜೆಸಿಬಿ ಕಂಡ ತಕ್ಷಣ ಎಚ್ಚೆತ್ತುಕೊಂಡು ಸ್ಥಳದಿಂದ ಓಡಿದ್ದರಿಂದ ವ್ಯಾಪಾರಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೆಸಿಬಿ ನಿಲ್ಲಿಸಲು ವ್ಯಾಪಾರಸ್ಥರು, ಜನರು ಕಲ್ಲು ಎಸೆದಿದ್ದಾರೆ. ಬಳಿಕ ಕುಪಿತಗೊಂಡ ಜನರು ಜೆಸಿಬಿ ಚಾಲಕನಿಗೆ ಮನಬಂದಂತೆ ಧರ್ಮದೇಟು ನೀಡಿದ್ದಾರೆ. ಸ್ಥಳಕ್ಕೆ ಬೆಳ್ಳೂರು ಪೊಲೀಸರ ಭೇಟಿ ನೀಡಿ, ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ:ಬೆಂಜ್ ಕಾರಿಗೆ ಡಿಕ್ಕಿ ಹೊಡೆದ ಕೆಎಸ್ಆರ್ಟಿಸಿ ಬಸ್: ಪ್ರಾಣಾಪಾಯದಿಂದ ಪಾರಾದ ದಂಪತಿ