ಹೃದಯಾಘಾತದಿಂದ ಚಾಲಕ ಸಾವು: ಪೆಟ್ರೋಲ್ ಬಂಕ್ಗೆ ನುಗ್ಗಿದ ಬಸ್, ಸಮಯ ಪ್ರಜ್ಞೆ ಮೆರೆದ ನಿರ್ವಾಹಕ
ವಿಜಯಪುರ: ಸಾರಿಗೆ ಬಸ್ ಚಾಲನೆ ಮಾಡುತ್ತಿದ್ದಾಗಲೇ ಚಾಲಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲೆಯ ಸಿಂದಗಿ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಬಸ್ ನೇರವಾಗಿ ರಸ್ತೆ ಪಕ್ಕದ ಪೆಟ್ರೋಲ್ ಬಂಕ್ಗೆ ನುಗ್ಗಿದೆ. ಆದರೆ, ಈ ಸಂದರ್ಭದಲ್ಲಿ ನಿರ್ವಾಹಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.
ಮುರಿಗೆಪ್ಪ ಅಥಣಿ ಎಂಬವರೇ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ ಚಾಲಕರಾಗಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರದಿಂದ ವಿಜಯಪುರಕ್ಕೆ ಬಸ್ ಹೊರಟಿತ್ತು. ಆದರೆ, ಬಸ್ನ ಹೆಡ್ ಲೈಟ್ ಸಮಸ್ಯೆಯಿಂದ ಪ್ರಯಾಣಿಕರನ್ನು ಕೆಳಗಿಳಿಸಿ ಸಿಂದಗಿ ಡಿಪೋಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಇದರ ನಡುವೆ ಏಕಾಏಕಿ ಚಾಲಕ ಮುರಿಗೆಪ್ಪಗೆ ಎದೆನೋವು ಕಾಣಿಸಿಕೊಂಡಿದೆ. ಪರಿಣಾಮ ಸೀಟಿನ ಮೇಲೆ ಕುಸಿದು ಪ್ರಾಣ ಕಳೆದುಕೊಂಡಿದ್ದಾರೆ.
ಇದರಿಂದ ಬಸ್ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಪೆಟ್ರೋಲ್ ಬಂಕ್ ಒಳಗೆ ನುಗ್ಗಿ ಬಂದಿದೆ. ಆಗ ಬಸ್ ನಿರ್ವಾಹಕ ಶರಣು ಟಾಕಳಿ ತಕ್ಷಣವೇ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಹೀಗಾಗಿ ಎರಡು ರೀತಿಯಲ್ಲಿ ದೊಡ್ಡ ಅಪಾಯ ತಪ್ಪಿದೆ. ಬಸ್ನಲ್ಲಿದ್ದ ಪ್ರಯಾಣಿಕರನ್ನು ಮೊದಲೇ ಕೆಳಗಡೆ ಇಳಿಸಿದ್ದು, ಪೆಟ್ರೋಲ್ ಬಂಕ್ಗೆ ನುಗ್ಗಿದ ಕ್ಷಣವೇ ಬಸ್ ನಿಲ್ಲಿಸಲಾಗಿದೆ. ಇದರ ದೃಶ್ಯಗಳು ಬಂಕ್ಗಳಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಈ ಬಗ್ಗೆ ನಿರ್ವಾಹಕ ಶರಣು ಟಾಕಳಿ ಮಾತನಾಡಿ, ಹೆಡ್ ಲೈಟ್ ಸಮಸ್ಯೆಯಿಂದ ಪ್ರಯಾಣಿಕರನ್ನು ಬೇರೆ ಬಸ್ಗೆ ಹತ್ತಿಸಿ ಡಿಪೋಗೆ ಬಸ್ ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಚಾಲಕ ಮುರಿಗೆಪ್ಪ ಬಾನೆಟ್ ಮೇಲೆ ಕುಸಿದು ಬಿದ್ದರು. ಪೆಟ್ರೋಲ್ ಬಂಕ್ ಒಳಗೆ ಬರುತ್ತಿದ್ದಂತೆ ನಾನು ಬ್ರೇಕ್ ಹಾಕಿ ನಿಲ್ಲಿಸಿದೆ ಎಂದು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಅಫಜಲಪುರ ಡಿಪೋ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೈಸೂರಿನಲ್ಲಿ ಕ್ಯಾಬ್ ಚಾಲಕ ಸಾವು:ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಬಂದಿದ್ದ ಕ್ಯಾಬ್ ಚಾಲಕ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. ತೇಜಸ್ ಕುಮಾರ್ (27) ಮೃತ ಚಾಲಕ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಇಬ್ಬರು ಪ್ರವಾಸಿಗರನ್ನು ಮೈಸೂರು ಜಿಲ್ಲೆಯ ದೇವಸ್ಥಾನಗಳು ಹಾಗೂ ಪ್ರವಾಸಿ ತಾಣಗಳಿಗೆ ತೇಜಸ್ ಕುಮಾರ್ ತಮ್ಮ ಕ್ಯಾಬ್ನಲ್ಲಿ ಕರೆದುಕೊಂಡು ಬಂದಿದ್ದರು.
ನಂಜನಗೂಡಿನ ಕಂಠೇಶ್ವರ ಸ್ವಾಮಿಯ ದರ್ಶನ ಮಾಡಿಸಿ, ನಂತರ ಚಾಮುಂಡಿ ಬೆಟ್ಟಕ್ಕೆ ಬಂದಿದ್ದರು. ಪಾರ್ಕಿಂಗ್ ಲಾಟ್ನಲ್ಲಿ ಕಾರನ್ನು ಪಾರ್ಕ್ ಮಾಡಿ ಚಾಲಕ ಹೊರಬಂದು ಪಕ್ಕದಲ್ಲಿಯೇ ಕುಳಿತಿದ್ದರು ಎನ್ನಲಾಗಿದೆ. ಆ ಸಮಯದಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ದರ್ಶನ ಮುಗಿಸಿಕೊಂಡು ಪ್ರವಾಸಿಗರು ಫೋನ್ ಮಾಡಿದ್ದಾರೆ. ಆದರೆ, ಮೊದಲ ಬಾರಿ ಕರೆ ಸ್ವಿಕರಿಸಿರಲಿಲ್ಲ. ನಂತರ ಮತ್ತೆ ಕರೆ ಮಾಡಿದಾಗ ಪಕ್ಕದಲ್ಲಿದ್ದ ಕ್ಯಾಬ್ ಚಾಲಕರು ಫೋನ್ ರಿಸೀವ್ ಮೃತಪಟ್ಟಿರುವ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದ ಕೃಷ್ಣರಾಜ ಠಾಣೆಯ ಪೋಲಿಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಶವಾಗಾರಕ್ಕೆ ರವಾನಿಸಿದ್ದಾರೆ. ಮತ್ತೊಂದೆಡೆ, ಇಂದು ಕಾರು ಮಾಲೀಕ ಹಾಗೂ ತೇಜಸ್ ಕುಮಾರ್ ಕುಟುಂಬದವರು ಮೈಸೂರಿಗೆ ಆಗಮಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ:ಮದ್ಯಪಾನ ಮಾಡಿ ಚಲಿಸುತ್ತಿದ್ದ ಕಾರಿನ ಮೇಲೆ ಪುಷ್ಅಪ್: ನಶೆ ಇಳಿಸಿದ ಪೊಲೀಸರು- ವಿಡಿಯೋ