ಬೆಂಗಳೂರು: ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ- ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ - ಸಿಸಿ ಕ್ಯಾಮರಾ
ಬೆಂಗಳೂರು :ರಸ್ತೆಯಲ್ಲಿದ್ದ ನಾಯಿಯ ಮೇಲೆ ವ್ಯಕ್ತಿಯೊಬ್ಬ ಕಾರು ಚಲಾಯಿಸಿ ವಿಕೃತಿ ಮೆರೆದ ಘಟನೆ ಆಗಸ್ಟ್ 8ರಂದು ರಾತ್ರಿ ಬೆಳ್ಳಂದೂರು-ಇಬ್ಬಲೂರು ಮುಖ್ಯ ರಸ್ತೆಯಲ್ಲಿ ನಡೆದಿದೆ. ಮಂಗಳವಾರ ರಾತ್ರಿ 9.45ರ ಸುಮಾರಿಗೆ ಕೃತ್ಯ ಎಸಗಿದ ಆರೋಪಿ, ಪರಾರಿಯಾಗಿದ್ದಾನೆ. ಬೀದಿನಾಯಿ ರಸ್ತೆಯಲ್ಲಿ ಇರುವುದನ್ನು ನೋಡಿ ಉದ್ದೇಶಪೂರ್ವಕವಾಗಿ ಕಾರನ್ನು ಹರಿಸಿರುವುದು ರಸ್ತೆಯ ಪಕ್ಕದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಪರಿಚಿತನ ದುಷ್ಕೃತ್ಯದಿಂದ ಗಂಭೀರವಾಗಿ ಗಾಯಗೊಂಡ ನಾಯಿ ಕೂಗಿದಾಗ ಸ್ಥಳೀಯರು ಗಮನಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ಕುರಿತು ಸಾರ್ವಜನಿಕರೊಬ್ಬರು ಎಕ್ಸ್ ಆ್ಯಪ್ ಮೂಲಕ ಪೊಲೀಸರ ಗಮನಕ್ಕೆ ತಂದಿದ್ದು, ಬೆಳ್ಳಂದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ಇಂಥದ್ದೇ ಪ್ರಕರಣ ಜಯನಗರ ಮೊದಲನೇ ಹಂತದಲ್ಲಿ ನಡೆದಿತ್ತು. ಉದ್ಯಮಿ ಆದಿಕೇಶವಲು ನಾಯ್ಡು ಮೊಮ್ಮಗ ಆದಿ ಉದ್ದೇಶಪೂರ್ವಕವಾಗಿ ಕಾರನ್ನು ರಿವರ್ಸ್ ಪಡೆದು ಬಂದು ಬೀದಿನಾಯಿ ಮೇಲೆ ಹತ್ತಿಸಿದ್ದನು. ನಾಯಿ ಸಾವನ್ನಪ್ಪಿತ್ತು. ಅನಾವೀಯ ಕೃತ್ಯವನ್ನು ನಟಿ, ಮಾಜಿ ಸಂಸದೆ ರಮ್ಯಾ ಸೇರಿದಂತೆ ಅನೇಕ ಶ್ವಾನಪ್ರಿಯರು ತೀವ್ರವಾಗಿ ಖಂಡಿಸಿದ್ದರು. ಸಿದ್ದಾಪುರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಇದನ್ನೂ ನೋಡಿ:ಸಾಕು ನಾಯಿಯ ಬೈಕ್ಗೆ ಕಟ್ಟಿ ಎಳೆದೊಯ್ದ ಮಾಲೀಕ - ವಿಡಿಯೋ ವೈರಲ್