ಮೇಕೆ ಮರಿಗೆ ಹಾಲುಣಿಸುತ್ತಿರುವ ಶ್ವಾನ: ಅಪರೂಪದ ದೃಶ್ಯ
Published : Jan 7, 2024, 2:25 PM IST
ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲೂಕಿನ ರಘುನಾಪುರದ ಕೃಷ್ಣಪ್ರಸಾದ್ ಎಂಬವರ ಮನೆಯ ನಾಯಿಯ ವಿಶೇಷ ತಾಯಿ ಪ್ರೀತಿ ಮನಮುಟ್ಟುವಂತಿದೆ. ಈ ನಾಯಿ ಕಳೆದ 20 ದಿನಗಳ ಹಿಂದೆ ಎರಡು ಮರಿಗಳಿಗೆ ಜನ್ಮ ನೀಡಿತ್ತು. ನೋಡಲು ಮುದ್ದಾಗಿದ ಮರಿಗಳನ್ನು ಸಾಕುವ ಸಲುವಾಗಿ ಬೇರೆಯವರು ತೆಗೆದುಕೊಂಡು ಹೋಗಿದ್ದಾರೆ. ಅದೇ ಸಮಯಕ್ಕೆ ಕೃಷ್ಣ ಪ್ರಸಾದ್ ಅವರ ಮೇಕೆಯೊಂದು ಮರಿಗಳನ್ನು ಹಾಕಿತ್ತು. ತನ್ನ ನಾಯಿ ಮರಿಗಳಿಗೆ ಹಾಲುಣಿಸುವ ಅವಕಾಶ ಕಳೆದುಕೊಂಡಿದ್ದ ನಾಯಿ, ಮೇಕೆ ಮರಿಗೆ ಹಾಲುಣಿಸುವ ಮೂಲಕ ತಾಯಿ ಸುಖ ಅನುಭವಿಸುತ್ತಿದೆ.
ರಾತ್ರಿ ಕಳೆದು ಬೆಳಗಾಗುವುದರೊಳಗೆ ಮೇಕೆ ಮರಿ ನಾಯಿಯ ಜೊತೆ ಒಡನಾಟ ಬೆಳೆಸಿದೆ. ಇದು ನಿತ್ಯ ಮೇಕೆ ಮರಿಗೆ ಹಾಲು ಕುಡಿಸುತ್ತದೆ. ಈ ವೇಳೆ ಹತ್ತಿರ ಹೋದರೆ ಬೊಗಳುತ್ತದೆ, ಕಚ್ಚಲು ಸಹ ಮುಂದಾಗುತ್ತದೆ. ಮೇಕೆ ಮರಿ ತನ್ನ ಅಸಲಿ ತಾಯಿ ಬಳಿ ಹೋಗಿ ಹಾಲು ಕುಡಿಯುತ್ತಿದ್ದರೆ, ಅಲ್ಲಿಗೆ ಹೋಗುವ ನಾಯಿ ಪುಟ್ಟ ಮರಿಯನ್ನು ತನ್ನೆಡೆ ಸೆಳೆದುಕೊಂಡು ಹಾಲುಣಿಸುತ್ತದೆ. ನಾಯಿಯ ತಾಯಿ ವಾತ್ಸಲ್ಯಕ್ಕೆ ಮನಸೋತ ಮಾಲೀಕ ಅವುಗಳನ್ನು ಅವುಗಳ ಪಾಡಿಗೆ ಬಿಟ್ಟುಬಿಟ್ಟಿದ್ದಾರೆ. ಕೃಷ್ಣ ಪ್ರಸಾದ್ ಕಾಶ್ಮಿರ ಮೂಲದ 30ಕ್ಕೂ ಹೆಚ್ಚು ಮೇಕೆಗಳನ್ನು ತಂದು ಸಾಕುತ್ತಿದ್ದಾರೆ.
ಇದನ್ನೂ ಓದಿ:ಮಕ್ಕಳ ಜತೆ ಆಟ, ನಾಯಿ ಜತೆ ಚಿನ್ನಾಟ; ಗ್ರಾಮಸ್ಥರ ಪ್ರೀತಿಗೆ ಪಾತ್ರವಾದ ಹನುಮ- ವಿಡಿಯೋ