ವಿನೂತನವಾಗಿ ಪ್ರೇಮಿಗಳ ದಿನ ಆಚರಿಸಿದ ವೈದ್ಯ ದಂಪತಿ: 75ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ
ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಶಸ್ತ್ರ ಚಿಕಿತ್ಸಕ ದಂಪತಿ ಡಾ ಹೆಚ್.ಎಸ್ ಶಶಿಧರ್ ಕುಮಾರ್ ಹಾಗೂ ಡಾ ಕೆ.ಎಸ್. ರತ್ನ ಅವರು ಪ್ರೇಮಿಗಳ ದಿನವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಫೆ.14ರಂದು 75ಕ್ಕೂ ಹೆಚ್ಚು ಬಡ ರೋಗಿಗಳಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಶಸ್ತ್ರಚಿಕಿತ್ಸೆಯ ಲಾಭ ಪಡೆಯುತ್ತಿರುವ ಬಹುತೇಕ ರೋಗಿಗಳು ದೂರದ ಗ್ರಾಮೀಣ ಪ್ರದೇಶಗಳ ಬಡ ಹಾಗೂ ಹಿರಿಯ ನಾಗರಿಕರಾಗಿದ್ದಾರೆ. ಈ ಪ್ರೇಮಿಗಳ ದಿನದಂದು ಅವರ ಜೀವನದಲ್ಲಿ ಹೊಸ ಬೆಳಕು ಮೂಡಿದೆ. ಡಾ.ಹೆಚ್ ಎಸ್ ಶಶಿಧರ್ ಕುಮಾರ್ ಮತ್ತು ಡಾ ಕೆ.ಎಸ್ ರತ್ನ ವೈದ್ಯ ದಂಪತಿ ಶಾಶ್ವತ ಪ್ರೀತಿಯನ್ನು ಆಚರಿಸುವ ಈ ಪ್ರೇಮಿಗಳ ದಿನದಂದು ಬಡ ರೋಗಿಗಳ ಬದುಕಿಗೆ ಹೊಸ ಬೆಳಕು ನೀಡಿದರು. ಈ ಮೂಲಕ ಅವರು ತಮ್ಮ ಪ್ರೀತಿಯನ್ನು ಸಮಾಜ ಸೇವೆ ಮಾಡುವ ಮೂಲಕ ಆಚರಿಸಿದರು.
ಇನ್ನು ಸಮಾಜ ಸೇವೆ ಎಂಬುದು ಈ ಕುಟುಂಬದಲ್ಲಿ ರಕ್ತಗತವಾಗಿ ಹರಿಯುತ್ತಾ ಬಂದಿದೆಯಂತೆ. ಡಾ. ಶಶಿಧರ್ ಕುಮಾರ್ ಅವರ ಇಡೀ ಕುಟುಂಬ ಕಳೆದ ಕೆಲವು ದಶಕಗಳಿಂದ ಲಕ್ಷಾಂತರ ಬಡ ರೋಗಿಗಳಿಗೆ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದ್ದಾರೆ. ಅವರ ತಂದೆ ಮತ್ತು ಮಕ್ಕಳು ಕೂಡ ಉಚಿತ ವೈದ್ಯಕೀಯ ಸೇವೆ ನೀಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಡೀ ಸಮಾಜಕ್ಕೆ ಮಾದರಿಯಾದ ಈ ಕುಟುಂಬ ಲಕ್ಷಾಂತರ ಜನರ ಬದುಕನ್ನು ಬೆಳಗುತ್ತಿದೆ.
ಇದನ್ನೂ ಓದಿ:ಪ್ರೇಮಿಗಳ ದಿನ 2023: ರಾಧೆಯ ಪ್ರೀತಿಗೆ ಅದರ ರೀತಿಗೆ ಶ್ರೀಕೃಷ್ಣನೋರ್ವನೇ ಸರಿಸಾಟಿ