ಜೈಲಿನಲ್ಲಿರುವ ಕೈದಿಗಳಿಗೆ ಅಯೋಧ್ಯೆ ಮಂತ್ರಾಕ್ಷತೆ, ಜಪ ಮಾಲೆ ವಿತರಣೆ - ಅಯೋಧ್ಯೆ ಮಂತ್ರಾಕ್ಷತೆ ಜಪ ಮಾಲೆ ವಿತರಣೆ
Published : Jan 19, 2024, 2:26 PM IST
ಚಾಮರಾಜನಗರ:ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಪ್ರತಿಯೊಬ್ಬರೂ ಕಾತರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರದ ಜೈಲಿನಲ್ಲಿರುವ ಕೈದಿಗಳಿಗೂ ಅಯೋಧ್ಯೆ ಮಂತ್ರಾಕ್ಷತೆ, ರಾಮ ಚರಿತ್ರೆ ಪುಸ್ತಕ ವಿತರಿಸಲಾಯಿತು.
ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜನಾರ್ದನ ಪ್ರತಿಷ್ಠಾನದಿಂದ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಆಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಕಾರಾಗೃಹದಲ್ಲಿರುವ ಕೈದಿಗಳಿಗೆ ಮಂತ್ರಾಕ್ಷತೆ, ಜಪಮಾಲೆ, ಪುಸ್ತಕ ವಿತರಣೆ ನಡೆಯಿತು. ಜನಾರ್ದನ ದೇಗುಲದ ಅರ್ಚಕ ಅನಂತಪ್ರಸಾದ ಕೈದಿಗಳಿಗೆ ರಾಮತಾರಕ ಮಂತ್ರಗಳನ್ನು ಹೇಳಿಕೊಟ್ಟು ನಿತ್ಯವೂ ಪಠಿಸುವಂತೆ ಮನವಿ ಮಾಡಿದರು.
ಅಯೋಧ್ಯೆ ರಾಮಮಂದಿರದ ಕ್ರಾರ್ಯಕ್ರಮಕ್ಕೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಜಿನ ಮುಡಿಗುಂಡಂ ವಿರಕ್ತ ಮಠದ ಶ್ರೀಕಂಠ ಸ್ವಾಮೀಜಿ ಒಬ್ಬರಿಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಇಂದು (ಶುಕ್ರವಾರ) ಅಧಿಕೃತ ಆಹ್ವಾನ ನೀಡಲಾಗಿದೆ. ಜಿಲ್ಲೆಯಿಂದ ಅಯೋಧ್ಯೆ ರಾಮಮಂದಿರಕ್ಕೆ ಆಹ್ವಾನ ಪಡೆದ ಏಕೈಕ ವ್ಯಕ್ತಿ ಇವರಾಗಿದ್ದಾರೆ. ಈ ಕುರಿತು, ಸ್ವಾಮೀಜಿ ಪ್ರತಿಕ್ರಿಯಿಸಿ, ''ಶುಕ್ರವಾರ ಅಯೋಧ್ಯೆಗೆ ತೆರಳುತ್ತಿದ್ದೇನೆ. ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ತೆರಳುತ್ತಿರುವುದು ಬಹಳ ಸಂತಸ ತಂದಿದೆ'' ಎಂದು ತಿಳಿಸಿದರು.