ಧಾರವಾಡ: ಮಹಿಳೆಯರಿಂದ ಕಲರ್‌ಫುಲ್ ಸಂಕ್ರಾಂತಿ ಆಚರಣೆ - ಜಾನಪದ ಸಂಶೋಧನಾ ಕೇಂದ್ರ
Published : Jan 15, 2024, 12:12 PM IST
ಧಾರವಾಡ:ವರ್ಷದ ಮೊದಲ ಹಬ್ಬ ಮಕರ ಸಂಕ್ರಮಣ. ಸೂರ್ಯ ತನ್ನ ಪಥ ಬದಲಿಸುವ ಹಬ್ಬವನ್ನು ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಬಗೆಬಗೆಯ ತಿಂಡಿ-ತಿನಿಸುಗಳನ್ನು ಒಂದೆಡೆ ತಂದಿಟ್ಟು ಸಂಭ್ರಮಿಸುತ್ತಾರೆ. ಬಣ್ಣಬಣ್ಣದ ಇಳಕಲ್ ಸೀರೆ, ಆಭರಣಗಳಲ್ಲಿ ಮಹಿಳೆಯರು ಕಂಗೊಳಿಸುತ್ತಾರೆ. 'ತಾಯಿ ಗಂಗವ್ವನ ಪೂಜೆಯ ಮಾಡಿ ಮನಸ್ಸಿನ ಮೈಲಿಗೆ ತೊಳಿಯಕ್ಕಾ' ಎಂಬ ಹಬ್ಬದ ಹಾಡು ಹಾಡುತ್ತಾರೆ.
ಧಾರವಾಡದ ಜಾನಪದ ಸಂಶೋಧನಾ ಕೇಂದ್ರದ ಸದಸ್ಯರು ರಂಗಾಯಣದ ಆವರಣದಲ್ಲಿ ತಮ್ಮ ಮನೆಯಿಂದ ಖಡಕ್ ರೊಟ್ಟಿ, ಸಜ್ಜಿ ರೊಟ್ಟಿ, ರಾಗಿ ರೊಟ್ಟಿ, ಎಳ್ಳುಹಚ್ಚಿದ ರೊಟ್ಟಿ, ಮಾದಲಿ, ಎಣಕಾಯಿ ಪಲ್ಲೆ, ಕೆಂಪು ಚಟ್ನಿ, ಮೊಸರು ಸೇರಿದಂತೆ ವಿವಿಧ ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿ ತಂದು ಸವಿದು ಸಂತಸಪಟ್ಟರು.
ಹಬ್ಬಾಚರಣೆಗೆ ಆಗಮಿಸಿದ್ದ ಆಶಾ ಮಾತನಾಡಿ, "ಕಳೆದ 8 ವರ್ಷದಿಂದ ಬಹಳ ಸಂಭ್ರಮದಿಂದ ಸಂಕ್ರಾಂತಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಮುಂದೆಯೂ ಹೀಗೇ ಮಾಡಿಕೊಂಡು ಹೋಗುತ್ತೇವೆ. ಪ್ರತಿಯೊಬ್ಬರೂ ಎಲ್ಲಾ ತರಹದ ಅಡುಗೆಗಳನ್ನು ಮಾಡಿಕೊಂಡು ಬರುತ್ತೇವೆ. ಎಲ್ಲರೂ ಸೇರಿ ಸಂಭ್ರಮಿಸುತ್ತೇವೆ. ಆಚರಣೆಗೆ ಬಂದವರು ಬೆಳಿಗ್ಗೆಯಿಂದ ಸಂಜೆಯತನಕ ಕಾಲ ಕಳೆಯುತ್ತೇವೆ. ಊಟ ಮಾಡಿ, ಸಣ್ಣ ವಯಸ್ಸಿನಲ್ಲಿ ಆಡುತ್ತಿದ್ದ ಆಟಗಳನ್ನೆಲ್ಲಾ ಆಡುತ್ತಾ ಎಲ್ಲರೂ ಖುಷಿಯಿಂದ ಇರುತ್ತೇವೆ. ಎಂದಿಗೂ ಮರೆಯಲಾರದಂತಹ ಸಂದರ್ಭವನ್ನು ಸೃಷ್ಟಿಸುತ್ತೇವೆ" ಎಂದು ಸಂತಸಪಟ್ಟರು.
ಜಾನಪದ ಸಂಶೋಧನಾ ಕೇಂದ್ರದ ಸದಸ್ಯೆ ನಂದಾ ಈ ಕುರಿತು ಮಾತನಾಡಿ, "ಸಂಕ್ರಾಂತಿ ವರ್ಷ ವರ್ಷ ಆಚರಿಸುತ್ತೇವೆ. ಈ ವರ್ಷ ವಿಶೇಷವೆಂದೇ ಕಬ್ಬು, ಜೋಳ ಇಟ್ಟು, ಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡುತ್ತೇವೆ. ಎಲ್ಲಾ ಮಹಿಳೆಯರು ಅಡುಗೆ ಮಾಡಿ ತಂದಿದ್ದು ಜೊತೆಗೂಡಿ ಊಟ ಮಾಡುತ್ತೇವೆ. ಇಲ್ಲಿ ಎಲ್ಲರೂ ಒಟ್ಟುಗೂಡಿರುವುದರಿಂದ ಯಾರಿಗೆ ಎಷ್ಟು ವಯಸ್ಸಾಗಿದೆ ಎಂಬುದೇ ತಿಳಿಯುವುದಿಲ್ಲ. ಅಷ್ಟು ಖುಷಿ ಖುಷಿಯಿಂದ ಇರುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ:ನಟ ರಜನಿಕಾಂತ್‌ಗೆ ದೇಗುಲ ನಿರ್ಮಿಸಿ ಪೊಂಗಲ್ ಆಚರಿಸಿದ ಅಭಿಮಾನಿ