ದುಬೈ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಧಾರವಾಡದ ಹಿರಿಯ: ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ - ದುಬೈ ಕ್ರೀಡಾಕೂಟ
ಧಾರವಾಡ:ದುಬೈನಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಶಿವಪ್ಪ ಸಲಕಿ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ. 400 ಮೀಟರ್, 800 ಮೀಟರ್ ಹಾಗೂ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಮೂರು ಚಿನ್ನದ ಪದಕ ಪಡೆದಿದ್ದಾರೆ. ಶಿವಪ್ಪ ಪದಕ ಪಡೆದುಕೊಂಡು ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು.
ಶಿವಪ್ಪ ಸಲಕಿ ಅವರು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ದೇಶದ ವಿವಿಧ ಸ್ಥಳಗಳಲ್ಲಿ ಹಾಗೂ ವಿದೇಶದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಮೊನ್ನೆಯಷ್ಟೇ ದುಬೈನಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲೂ 76 ವರ್ಷದ ಶಿವಪ್ಪ ಸಲಕಿ ಅವರು ಪಾಲ್ಗೊಂಡು ಮೂರು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ದುಬೈನಿಂದ ಮರೇವಾಡ ಗ್ರಾಮಕ್ಕೆ ಆಗಮಿಸಿದ ಶಿವಪ್ಪ ಸಲಕಿ ಅವರನ್ನು ಗ್ರಾಮಸ್ಥರು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿದರು. ಜಾಂಜ್ ಮೇಳದೊಂದಿಗೆ ಅದ್ಧೂರಿ ಮೆರವಣಿಗೆ ಮಾಡಿದರು. ದುಬೈನಲ್ಲಿ ಚಿನ್ನದ ಪದಕ ಗೆದ್ದು ಭಾರತ ಮತ್ತು ಮರೇವಾಡ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಮರೇವಾಡ ಗ್ರಾಮಸ್ಥರು ಅಭಿಮಾನ ಮೆರೆದಿದ್ದಾರೆ.