ಮತ್ತೆ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ: ಸಂಕಷ್ಟದಲ್ಲಿ ದೆಹಲಿಯ ಜನತೆ- ವಿಡಿಯೋ
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದೆ. ಯಮುನಾ ನದಿ ಮತ್ತೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇಂದು ಬೆಳಗ್ಗೆ 7 ಗಂಟೆಗೆ 205.81 ಮೀಟರ್‌ಗಳಷ್ಟು ನೀರು ದಾಖಲಾಗಿದೆ. ದೆಹಲಿಯಲ್ಲಿ ಇತ್ತೀಚೆಗೆ ಹಲವು ದಿನಗಳಿಂದ ಮಳೆಯಾಗದಿದ್ದರೂ ಹತ್ನಿಕುಂಡ್ ಬ್ಯಾರೇಜ್‌ನಿಂದ ಹೆಚ್ಚುವರಿ ನೀರು ಹೊರ ಬಿಡುತ್ತಿರುವ ಹಿನ್ನೆಲೆಯಲ್ಲಿ ಯಮುನೆಯ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗುತ್ತಿದೆ. ಹೀಗಾಗಿ, ಮತ್ತೊಮ್ಮೆ ದೆಹಲಿ-ಎನ್‌ಸಿಆರ್ ನಲ್ಲಿ ಪ್ರವಾಹ ಪರಿಸ್ಥಿತಿ ಸಾಧ್ಯತೆ ಕಂಡುಬಂದಿದೆ.
ಇನ್ನೊಂದೆಡೆ, ಹಿಂಡನ್ ನದಿಯಲ್ಲಿ ಶನಿವಾರ ನೀರಿನ ಮಟ್ಟ ಏರಿಕೆಯಾಗಿದ್ದು, ಸಮೀಪದ ಮನೆಗಳಿಗೆ ನೀರು ನುಗ್ಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ಸ್ಥಳಾಂತರಿಸಿದ್ದಾರೆ. ಹಿಂಡನ್ ನದಿಯು ಯಮುನಾ ನದಿಯ ಉಪನದಿ. ಯಮುನೆಯ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಜನತೆಯನ್ನು ಸಂಕಷ್ಟಕ್ಕೆ ತಳ್ಳಿದೆ. ಮತ್ತೊಂದೆಡೆ, ದೆಹಲಿ ಸರ್ಕಾರವು ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈಗಾಗಲೇ ಸೂಚಿಸಿದೆ. ಹತ್ನಿಕುಂಡ್ ಬ್ಯಾರೇಜ್‌ನಿಂದ ನೀರು ಬಿಡುವ ಪ್ರಮಾಣ ಗಂಟೆಗೆ ಸುಮಾರು 1000 ಮೀಟರ್‌ಗೆ ಏರಿಕೆಯಾಗಿದೆ. ಜುಲೈ 11, 2023ರಂದು 3,60,000 ಕ್ಯೂಸೆಕ್ ನೀರು ಬಿಡಲಾಗಿತ್ತು. ಶುಕ್ರವಾರ ಸಂಜೆ 07 ಗಂಟೆಗೆ 29,973 ಕ್ಯೂಸೆಕ್ ಬಿಡಲಾಗಿದೆ. ಕಳೆದ ಎರಡು-ಮೂರು ದಿನಗಳಲ್ಲಿ ನೀರಿನ ಮಟ್ಟದಲ್ಲಿ ಅಲ್ಪ ಪ್ರಮಾಣದ ಏರಿಳಿತಗಳಿವೆ.
ಇದನ್ನೂ ಓದಿ :ಮಳೆಯಿಂದ ಉಕ್ಕೇರಿದ ಯಮುನೆ; ತಾಜ್ಮಹಲ್ ಗೋಡೆಗೂ ಅಪ್ಪಳಿಸಿದ ನೀರು! ಅಪಾಯವಿಲ್ಲವೆಂದ ಪುರಾತತ್ವ ಇಲಾಖೆ