ಹೆದ್ದಾರಿಯಲ್ಲಿ ಡೆಡ್ಲಿ ವ್ಹೀಲಿಂಗ್ ಹಾವಳಿ.. ಇಬ್ಬರು ಬೈಕ್ ಸವಾರರಿಗೆ ಗಂಭೀರ ಗಾಯ
ಮಂಡ್ಯ :ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಹೀಲಿಂಗ್ ಹಾವಳಿ ಮಿತಿ ಮೀರಿದ್ದು, ಪೊಲೀಸರು ಎಷ್ಟೇ ಕಠಿಣ ಕ್ರಮ ಕೈಗೊಂಡರೂ ವ್ಹೀಲಿಂಗ್ ಮಾಡುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇಂದು ಕೂಡ ಮದ್ದೂರು ಪಟ್ಟಣದ ಕೊಲ್ಲಿ ವೃತ್ತದಿಂದ ನಿಡಘಟ್ಟದ ಕಡೆಗೆ ಎರಡು ಬೈಕ್ಗಳಲ್ಲಿ ಡೆಡ್ಲಿ ವ್ಹೀಲಿಂಗ್ ಮಾಡಿಕೊಂಡು ಬಂದ ಯುವಕರು ನಿಯಂತ್ರಣ ತಪ್ಪಿ ಇನ್ನೋವಾ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು ಕಡೆ ಹೋಗುತ್ತಿದ್ದ ಇನ್ನೋವಾ ಕಾರಿನ ಚಾಲಕ ಶಿಂಷಾ ನದಿ ಸಮೀಪ ಸರ್ವಿಸ್ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಉಬ್ಬು ಬಳಿ ನಿಧಾನವಾಗಿ ಚಾಲನೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ವ್ಹೀಲಿಂಗ್ ಮಾಡಿಕೊಂಡು ಬರುತ್ತಿದ್ದ ಎರಡು ಬೈಕ್ಗಳು ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿವೆ. ಪರಿಣಾಮ ಇಬ್ಬರು ಬೈಕ್ ಸವಾರರಿಗೆ ತಲೆಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿ ಕಾರಿನ ಹಿಂಬದಿ ಸಂಪೂರ್ಣ ಜಖಂಗೊಂಡಿದೆ. ತಕ್ಷಣವೇ ವಾಹನ ಸವಾರರನ್ನು ಸ್ಥಳೀಯರು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಮದ್ದೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮತ್ತೊಂದೆಡೆ ವ್ಹೀಲಿಂಗ್ ಹುಚ್ಚಾಟ ಮೆರೆಯುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು, ವಾಹನ ಸವಾರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ :ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಅಪಘಾತ: ಯುವ ನಟ ಲೋಕೇಶ್ ಸಾವು