ವಿಧಾನಸೌಧದ ಮೆಟ್ಟಿಲುಗಳಿಗೆ ತಲೆಬಾಗಿ ನಮಸ್ಕರಿಸಿದ ಡಿಸಿಎಂ ಶಿವಕುಮಾರ್..! - ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಇಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದರು. ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಮತ್ತು ಎಂಟು ಜನ ಸಚಿವರು ಸಹ ಪದಗ್ರಹಣ ಮಾಡಿದರು.
ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ ನೂತನ ಸಿಎಂಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಮಾಣವಚನ ಮುಗಿದ ಬಳಿಕ ನೂತನ ಸಿ ಎಂ ಸಿದ್ದರಾಮಯ್ಯ, ಡಿ ಸಿ ಎಂ ಡಿ.ಕೆ.ಶಿವಕುಮಾರ್ ವಿಧಾನಸೌಧ ಪ್ರವೇಶ ಮಾಡಿದರು. ಆದರೆ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಒಳಗೆ ಪ್ರವೇಶಿಸುತ್ತಿದ್ದ ವೇಳೆ ಡಿ.ಕೆ.ಶಿವಕುಮಾರ್ ಮೆಟ್ಟಿಲುಗಳಿಗೆ ತಲೆಬಾಗಿ ನಮಸ್ಕರಿಸಿ ಒಳ ಪ್ರವೇಶ ಮಾಡಿದರು. ಇದೇ ವೇಳೆ ನೂತನ ಸಿಎಂ ಸಿದ್ದರಾಮಯ್ಯನವರು ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಇರುವ ಪುಸ್ತಕಕ್ಕೆ ಸಹಿ ಹಾಕಿದರು. ನಂತರ ಸಚಿವ ಸಂಪುಟ ಸಭೆ ನಡೆಯಿತು.
ವಿವಿಧ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ:ಡಿ ಕೆ ಶಿವಕುಮಾರ್ ಶ್ರೀಗಂಗಾಧರ ಅಜ್ಜನ ಹೆಸರಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಡಾ. ಜಿ. ಪರಮೇಶ್ವರ್ ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸತೀಶ್ ಜಾರಕಿಹೊಳಿ ಬುದ್ಧ, ಬಸವ ಮತ್ತು ಅಂಬೇಡ್ಕರ್ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಜತೆಗೆ ಹೆಚ್ ಕೆ ಮುನಿಯಪ್ಪ, ಕೆ ಜೆ ಜಾರ್ಜ್, ಎಂ ಪಿ ಪಾಟೀಲ್, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್, ಪ್ರಿಯಾಂಕ್ ಖರ್ಗೆ ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನೂಓದಿ:ಸಿದ್ದರಾಮಯ್ಯ, ಡಿಕೆಶಿ ಪ್ರಮಾಣ ವಚನಕ್ಕೆ ಹರಿದು ಬಂದ ಜನಸಾಗರ.. ಕಂಠೀರವ ಕ್ರೀಡಾಂಗಣದಲ್ಲಿ ಮೊಳಗಿದ ಜಯಘೋಷ