ಪೌರಕಾರ್ಮಿಕರ ಅಹವಾಲುಗಳ ಬಗ್ಗೆ ಸರ್ಕಾರ ನಿರ್ಧರಿಸಲಿದೆ, ಪ್ರತಿಭಟನೆ ಕೈಬಿಡಿ: ಡಿಕೆಶಿ ಮನವಿ - ಡಿಸಿಎಂ ಡಿ ಕೆ ಶಿವಕುಮಾರ್
Published : Dec 22, 2023, 10:34 PM IST
ಬೆಂಗಳೂರು:ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ನೀವು ಹೋರಾಟ ಹಮ್ಮಿಕೊಂಡಿದ್ದೀರಿ. ಇದು ನಿಮ್ಮ ಬದುಕಿಗಾಗಿ ನಡೆಯುತ್ತಿರುವ ಹೋರಾಟ. ಈ ಹಿಂದಿನ ಸರ್ಕಾರ ಚುನಾವಣೆಗೆ ಮುನ್ನ ನಿಮ್ಮ ಜತೆ ಮಾತುಕತೆಗೆ ಮುಂದಾದರೂ ಆ ಮಾತುಕತೆ ವಿಫಲವಾಯಿತು. ನಂತರ ನೀವೆಲ್ಲರೂ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ, ನಮಗೆ ಬೆಂಬಲ ನೀಡಿ ಆಶೀರ್ವಾದ ಮಾಡಿದ್ದೀರಿ. ಹೀಗಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ನಿಮ್ಮ ಪರಿಸ್ಥಿತಿ ಬಗ್ಗೆ ನಮಗೆ ಅರಿವಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂದು ಪೌರಾಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಅಹವಾಲು ಆಲಿಸಿ ಮಾತನಾಡಿದ ಅವರು, ನಮ್ಮ ಪ್ರಣಾಳಿಕೆಯಲ್ಲಿ ಅನೇಕ ಭರವಸೆಗಳನ್ನು ಸೇರಿಸಿದ್ದೇವೆ. ನಾವು ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದೇವೆ. ಇದಕ್ಕಾಗಿ ಸುಮಾರು 60 ಸಾವಿರ ಕೋಟಿಯನ್ನು ನಿಗದಿ ಮಾಡಿ ಕೊಟ್ಟ ಮಾತಿನಂತೆ ನಡೆಯುತ್ತಿದ್ದೇವೆ. ಸದ್ಯದಲ್ಲೇ ನಿಮ್ಮ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಸಭೆ ಕರೆಯುತ್ತೇನೆ. ಸರ್ಕಾರ ಹಾಗೂ ನಿಮಗೆ ಒಳ್ಳೆಯದಾಗುವಂತೆ ಆರ್ಥಿಕ ಪರಿಸ್ಥಿತಿ ಹಾಗೂ ಕಾನೂನು ಚೌಕಟ್ಟಿನಲ್ಲಿ ತೀರ್ಮಾನ ಮಾಡಲಿದೆ ಎಂದು ಭರವಸೆ ನೀಡಿದರು.
ನಗರದ ಸ್ವಚ್ಛತೆ ಕಾಪಾಡುತ್ತಾ ನಿಮ್ಮ ಬದುಕಿನಲ್ಲಿ ಸ್ವಾಭಿಮಾನದಿಂದ ದೇಶ ಸೇವೆ ಮಾಡುತ್ತಿದ್ದೀರಿ. ನಿಮ್ಮ ಬೇಡಿಕೆ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ. ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರು.
ಇದನ್ನೂಓದಿ:ದೇಶದ ಚರಿತ್ರೆಯಲ್ಲಿ ದಾಖಲಾಗುವ ಕೆಲಸವನ್ನು ಸ್ಪೀಕರ್‌ರಿಂದ ಕೇಂದ್ರ ಸರ್ಕಾರ ಮಾಡಿಸಿದೆ: ಡಿಕೆಶಿ