ಸೇನಾ ವಾಹನಕ್ಕೆ ರಭಸವಾಗಿ ಗುದ್ದಿದ ಟ್ರಕ್, ಇಬ್ಬರು ಯೋಧರಿಗೆ ಗಾಯ: ವಿಡಿಯೋ - ರಸ್ತೆ ಅಪಘಾತದಲ್ಲಿ ಯೋಧರಿಗೆ ಗಾಯ
ಪುಲ್ವಾಮಾ (ಜಮ್ಮು ಮತ್ತು ಕಾಶ್ಮೀರ):ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಲ್ಲಿ ವೇಗವಾಗಿ ಬಂದ ಟ್ರಕ್ ರಸ್ತೆ ಬದಿ ಭದ್ರತೆಗೆ ನಿಂತಿದ್ದ ಸೇನಾ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರು ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಜಮ್ಮು ಕಾಶ್ಮೀರದಲ್ಲಿ ಮಳೆಯಾಗುತ್ತಿದೆ. ಸೇನಾ ವಾಹನ ರಸ್ತೆ ಪಕ್ಕದ ಗಸ್ತು ಪರಿಧಿಯಲ್ಲಿ ನಿಂತಿತ್ತು. ಇನ್ನೊಂದು ವಾಹನವನ್ನು ಓವರ್ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬಂದ ಟ್ರಕ್ ನಿಯಂತ್ರಣ ಕಳೆದುಕೊಂಡು ಒಂದು ಬದಿಯಿಂದ ಇನ್ನೊಂದು ಬದಿಗೆ ವೇಗವಾಗಿ ಬಂದಿದೆ. ಈ ಬದಿಯಲ್ಲಿ ನಿಂತಿದ್ದ ಸೇನಾ ವಾಹನವನ್ನು, ಬೇಲಿಯ ಸಮೇತವಾಗಿ ರಭಸವಾಗಿ ಗುದ್ದಿದೆ. ಇದರಿಂದ ಒಳಗಿದ್ದ ಇಬ್ಬರು ಸಿಆರ್‌ಪಿಎಫ್ ಸೈನಿಕರು ಗಾಯಗೊಂಡರು. ಸೇನಾ ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಛತ್ತೀಸ್‌ಗಢದ ಜಗದಲ್‌ಪುರ ಜಿಲ್ಲೆಯಲ್ಲಿ ಬೀಸಿದ ಬಿರುಗಾಳಿಯಿಂದಾಗಿ ಸಿಆರ್‌ಪಿಎಫ್ ಶಿಬಿರಕ್ಕೆ ತೀವ್ರ ಹಾನಿಯಾಗಿತ್ತು. 10 ಮಂದಿ ಯೋಧರು ಗಾಯಗೊಂಡಿದ್ದರು. ಬಲವಾದ ಗಾಳಿಯಿಂದಾಗಿ ಸಿಆರ್‌ಪಿಎಫ್ ಬೆಟಾಲಿಯನ್ ಕ್ಯಾಂಪ್‌ನಲ್ಲಿರುವ ಬ್ಯಾರಕ್‌ಗಳ ಛಾವಣಿಗಳು ಹಾನಿಗೊಳಗಾಗಿವೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದರು.