ಅಮಾವಾಸ್ಯೆ: ನಿರೀಕ್ಷೆಗೂ ಮೀರಿ ಮಾದಪ್ಪನ ಬೆಟ್ಟಕ್ಕೆ ಭಕ್ತರ ದಂಡು, ಬಿಸಿಲಿನಲ್ಲೂ ವಿವಿಧ ಉತ್ಸವ - ಈಟಿವಿ ಭಾರತ್ ಕನ್ನಡ ನ್ಯೂಸ್
ಚಾಮರಾಜನಗರ : ಚುನಾವಣಾ ಭರಾಟೆ, ಎಲೆಕ್ಷನ್ ಕಾವು ಮುಗಿದ ಬಳಿಕ ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಇಂದು ಅಮಾವಾಸ್ಯೆ ಹಿನ್ನೆಲೆ ಭಕ್ತಸಾಗರವೇ ಹರಿದು ಬಂದಿದೆ. ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಯಿದ್ದ ಹಿನ್ನೆಲೆ ಕಳೆದ ಎರಡು ತಿಂಗಳಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರಲಿಲ್ಲ. ಇದೀಗ ಚುನಾವಣೆ ಮುಗಿದು ಫಲಿತಾಂಶ ಹೊರ ಬಿದ್ದ ಹಿನ್ನೆಲೆ ಕಳೆದ ಎರಡು ದಿನಗಳಿಂದ ಸಾವಿರಾರು ಮಂದಿ ಭಕ್ತರು ಮಾದಪ್ಪನ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.
ಅಮಾವಾಸ್ಯೆಗೆ ಈ ಪರಿ ಭಕ್ತರು ಆಗಮಿಸುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ಪ್ರಾಧಿಕಾರದ ಸಿಬ್ಬಂದಿಗಳು ಹಾಗೂ ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಅಮಾವಾಸ್ಯೆ ಅಂಗವಾಗಿ ದೇಗುಲ ಗರ್ಭಗುಡಿ ಸೇರಿದಂತೆ ಸುತ್ತಮುತ್ತಲ ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದು ದೇವರಿಗೆ ಬೆಳಗ್ಗೆಯಿಂದಲೇ ಅಭಿಷೇಕ, ಬಿಲ್ವಾರ್ಚನೆ ನೆರವೇರಿಸಿದ್ದಾರೆ.
ಹುಲಿವಾಹನ, ರುದ್ರಾಕ್ಷಿ ವಾಹನ ಹಾಗೂ ಬಸವ ವಾಹನ ಸೇವೆ ಮಾಡುತ್ತಿರುವ ಭಕ್ತರು ಬಿರು ಬಿಸಿಲಿನಲ್ಲೂ ಉತ್ಸಾಹದಿಂದ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಉತ್ಸವದ ವೇಳೆ ಹರಕೆ ಹೊತ್ತ ಜನರು ದವಸ ಧಾನ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ಎಸೆಯುವುದರ ಮೂಲಕ ದಂಡಿನ ಕೋಲನ್ನು ಹೊತ್ತು ಪ್ರಾರ್ಥಿಸುವುದು ಸಾಮಾನ್ಯ ದೃಶ್ಯವಾಗಿತ್ತು. ಮತ್ತೊದೆಡೆ ಹರಕೆ ಹೊತ್ತವರು ಮುಡಿಸೇವೆ, ಉರುಳು ಸೇವೆ, ಪಂಜಿನ ಸೇವೆ ಹಾಗೂ ರಜಾ ಒಡೆಯುವ ಸೇವೆಯನ್ನು ಕೈಗೊಳ್ಳುವುದರ ಮೂಲಕ ತಮ್ಮ ಹರಕೆಯನ್ನು ತೀರಿಸಿದರು. ಬೆಟ್ಟಗೆ ಬರುವ ಭಕ್ತರಿಗೆ ಪ್ರಾಧಿಕಾರದ ವತಿಯಿಂದ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಇದನ್ನೂ ಓದಿ :ಸಿದ್ದು ಪ್ರಮಾಣ ವಚನಕ್ಕೆ ಕ್ಷಣಗಣನೆ: ಅಭಿಮಾನಿಗಳಿಂದ ಚಾಮರಾಜೇಶ್ವರನಿಗೆ ಕ್ಷೀರಾಭೀಷೇಕ