ಆಧಾರ್ ಕಾರ್ಡ್ ತಿದ್ದುಪಡಿಗೆ ಜನರ ನೂಕು ನುಗ್ಗಲು..ಕಣ್ಣೀರು ಹಾಕುತ್ತಾ ಕೆಲಸ ಮಾಡುತ್ತಿರುವ ಸಿಬ್ಬಂದಿ
ರಾಯಚೂರು:ಕಾಂಗ್ರೆಸ್ನ ಗ್ಯಾರಂಟಿ ಯೋಜನೆ ಜಾರಿ ಹಿನ್ನೆಲೆ ಆಧಾರ್ ಕಾರ್ಡ್ ತಿದ್ದುಪಡಿಗೆ ಜನರ ನೂಕು ನುಗ್ಗಲು ಉಂಟಾಗುತ್ತಿದೆ. ರಾಯಚೂರಿನ ಅಂಚೆ ಕಚೇರಿಯಲ್ಲಿರುವ ಆಧಾರ್ ಕೇಂದ್ರದಲ್ಲಿ ನಿತ್ಯ ಜನರು ಆಗಮಿಸುತ್ತಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ಬಿಡುವಿಲ್ಲದೇ ಆಧಾರ್ ಕಾರ್ಡ್ ತಿದ್ದುಪಡಿ ಕಾರ್ಯ ನಡೆಸಲಾಗುತ್ತಿದೆ. ಆದರೆ, ಸರ್ವರ್ ಡೌನ್ನಿಂದಾಗಿ ಆಧಾರ್ ಕಾರ್ಡ್ ತಿದ್ದುಪಡಿ ವಿಳಂಬವಾಗುತ್ತಿದೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಮನಬಂದಂತೆ ವಾಗ್ದಾಳಿ ನಡೆಸುತ್ತಿದ್ದಾರೆ.
ಸಾರ್ವಜನಿಕರ ಮಾತಿನಿಂದ ಮನನೊಂದು ಕಣ್ಣೀರು ಹಾಕುತ್ತಾ ಅಂಚೆ ಕಚೇರಿ ಮಹಿಳಾ ಸಿಬ್ಬಂದಿಯೊಬ್ಬರು ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಸರತಿ ಸಾಲಿನಲ್ಲಿ ಬರದೇ ಬೇಕಾಬಿಟ್ಟಿ ಬಂದು ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಮಹಿಳಾ ಸಿಬ್ಬಂದಿ ಸೂಚನೆಗೂ ಕೇರ್ ಮಾಡುತ್ತಿಲ್ಲ ಎನ್ನಲಾಗಿದೆ. ಜನರಿಂದ ಅನ್ನಿಸಿಕೊಂಡು ಕೆಲಸ ಮಾಡಲು ನನಗೆ ಆಗಲ್ಲ. ಕೆಲಸ ಮಾಡಿದರೂ ಜನರು ಬೈಯುತ್ತಾರೆ. ಇಷ್ಟು ಕೆಲಸದ ಒತ್ತಡ ಹೆಚ್ಚಾಗಿದ್ದರೂ ಅಂಚೆ ಕಚೇರಿಯ ಮೇಲಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಮತ್ತೊಂದೆಡೆ ಆಧಾರ್ ಕಾರ್ಡ್ ತಿದ್ದುಪಡಿಗೆ ಮತ್ತೊಂದು ಕೌಂಟರ್ ತೆರೆಯಲು ಅಂಚೆ ಇಲಾಖೆ ಮುಂದಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಆಧಾರ್ ತಿದ್ದುಪಡಿ: ಹೊಸ ನಿಯಮವೇನು ಗೊತ್ತೇ?