ಕೊಪ್ಪಳದಲ್ಲಿ ಬೆಳೆ ಹಾನಿ: ನಷ್ಟ ಪರಿಹಾರ ನೀಡುವಂತೆ ರೈತರ ಒತ್ತಾಯ - ಕೊಪ್ಪಳದಲ್ಲಿ ಬೆಳೆ ಹಾನಿ
Published : Dec 23, 2023, 4:21 PM IST
ಕೊಪ್ಪಳ: ಮಳೆ ಕೈ ಕೊಟ್ಟಿರುವುದರಿಂದ ರಾಜ್ಯಾದ್ಯಂತ ಬರ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಕೇಂದ್ರ ತಂಡವು ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಿದೆ. ಕೊಪ್ಪಳ ಜಿಲ್ಲೆಯ ಏಳು ತಾಲೂಕಿನಲ್ಲೂ ಬರ ಉಂಟಾಗಿದ್ದು, ರೈತರು ಬೆಳೆದ ಬೆಳೆಗಳು ನೆಲ ಕಚ್ಚಿವೆ. ಜಿಲ್ಲಾದ್ಯಂತ ಮುಂಗಾರು ಆರಂಭದಲ್ಲಿ ಬಿದ್ದ ಮಳೆಗೆ ರೈತರು ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದರು. ಆದರೆ, ಜೂನ್ ಮತ್ತು ಜುಲೈನಲ್ಲಿ ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಒಣಗಿಹೋಗಿವೆ.
ಈ ಕುರಿತು ಪ್ರತಿಕ್ರಿಯಿಸಿ ರೈತ ಮಾರುತಿ, ನಾವು ಸುಮಾರು 30 ಸಾವಿರ ರೂಪಾಯಿ ಖರ್ಚು ಮಾಡಿ ಮೆಕ್ಕೆ ಜೋಳ ಬೆಳೆದಿದ್ದೇವೆ. ಮಳೆ ಕೈಕೊಟ್ಟಿರುವುದರಿಂದ ಬೆಳೆ ಹಾಳಾಗಿದೆ. ಇದರಿಂದ ನಾವು ಹಾಕಿದ ಬಂಡವಾಳವೂ ವ್ಯರ್ಥವಾಗಿದೆ. ಸರ್ಕಾರದಿಂದಲೂ ಏನೂ ಪರಿಹಾರ ಲಭಿಸಿಲ್ಲ. ಈ ಹಿಂದೆ ಅಧಿಕಾರಿಗಳ ತಂಡ ಹೊಲಕ್ಕೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿತ್ತು. ಈ ವೇಳೆ, ಅಧಿಕಾರಿಗಳು ಬರ ಪರಿಹಾರದ ಭರವಸೆ ನೀಡಿದ್ದರು. ಆದರೆ ನಮಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ನಮಗೆ ಮಾತ್ರವಲ್ಲದೇ ಇತರ ರೈತರಿಗೂ ಪರಿಹಾರ ಲಭ್ಯವಾಗಿಲ್ಲ ಎಂದು ಹೇಳಿದರು.
ಈ ಹಿಂದೆ ನಾವು ಹತ್ತಿಯನ್ನು ಬೆಳೆದಿದ್ದೆವು. ಮುಂಗಾರು ಕೈಕೊಟ್ಟಿದ್ದರಿಂದ ಹತ್ತಿಯೂ ನೆಲಕಚ್ಚಿದೆ. ಈ ವರ್ಷದ ಎಲ್ಲ ಬೆಳೆಯೂ ನಷ್ಟವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಬೆಳೆ ಕೈ ಕೊಟ್ಟಿರುವುದರಿಂದ ನಮಗೆ ಬೇರೆದಾರಿ ಇಲ್ಲದೇ ಬೇರೆ ಕೂಲಿ ಕೆಲಸಕ್ಕೆ ತೆರಳುವ ಪರಿಸ್ಥಿತಿ ಎದುರಾಗಿದೆ ಎಂದರು.
ಕಳೆದೆರಡು ತಿಂಗಳ ಹಿಂದೆ ಕೇಂದ್ರ ತಂಡ ಜಿಲ್ಲೆಗೆ ಆಗಮಿಸಿ ಬೆಳೆಹಾನಿ ಕುರಿತು ಅಧ್ಯಯನ ನಡೆಸಿತ್ತು. ಈ ವೇಳೆ, ಕೊಪ್ಪಳ ಜಿಲ್ಲೆಯ ಏಳು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಗುರುತಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಯಾವ ರೈತರಿಗೂ ಬರ ಪರಿಹಾರ ದೊರೆತಿಲ್ಲ.ಇದರಿಂದ ರೈತರು ಕಷ್ಟದಲ್ಲಿ ಕಾಲ ದೂಡುವಂತಾಗಿದೆ.
ಇದನ್ನೂ ಓದಿ :ರಾಮನಗರ: ಗ್ರಾಮಕ್ಕೆ ನುಗ್ಗಿದ 12 ಕಾಡಾನೆಗಳು.. ಜನರಲ್ಲಿ ಹೆಚ್ಚಿದ ಆತಂಕ