ರಾಯಚೂರಿನಲ್ಲಿ ಆಹಾರ ಅರಿಸಿ ಜನ ವಸತಿ ಪ್ರದೇಶಕ್ಕೆ ಬಂದ ಮೊಸಳೆ: ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಜನರು
ರಾಯಚೂರು :ರಾಜ್ಯದ ಹಲವೆಡೆ ಮಳೆಯಾಗದೇ ನದಿಗಳು ಬತ್ತುತ್ತಿದ್ದು, ಆಹಾರ ಅರಸಿ ಮೊಸಳೆಗಳು ಜನ ವಸತಿ ಪ್ರದೇಶಗಳ ಕಡೆ ಬರುತ್ತಿವೆ. ರಾಯಚೂರು ತಾಲೂಕಿನ ದೇವಸೂಗೂರಿನ ಜನತಾ ಕಾಲೋನಿಯಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಅಲ್ಲಿನ ನಿವಾಸಿಗಳೇ ಮೊಸಳೆಯನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಇಂದು ಬೆಳಗ್ಗೆ ಕಾಲೋನಿಯ ಮನೆಯೊಂದರ ಕೋಣೆಯಲ್ಲಿ ಅವಿತಿದ್ದ ಮೊಸಳೆಯನ್ನು ಕಂಡು ಅಲ್ಲಿನ ಜನರು ಆತಂಕಗೊಂಡಿದ್ದಾರೆ. ಬಳಿಕ ವ್ಯವಸ್ಥಿತವಾಗಿ ಪ್ಲಾನ್ ಮಾಡಿಕೊಂಡ ಜನರೇ ಮೊಸಳೆಯನ್ನು ಹಗ್ಗ ಹಾಕಿ ಸೆರೆ ಹಿಡಿಯಲು ಮುಂದಾಗಿದ್ದಾರೆ. ಆಗ ಮೊಸಳೆ ಸಹ ತನ್ನ ಬಾಯಿ ತೆರೆದು ದಾಳಿಗೆ ಮುಂದಾಗಿದೆ. ಆದರೂ ಯಾವುದಕ್ಕೂ ಭಯ ಪಡೆದ ಜನರು ಸೆರೆ ಹಿಡಿದ್ದಾರೆ. ನಂತರ ಶಕ್ತಿನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆಯವರು ಮೊಸಳೆಯನ್ನು ತೆಗೆದುಕೊಂಡು ಹೋಗಿದ್ದಾರೆ.
ದೇವಸೂಗೂರು ಗ್ರಾಮ ಕೃಷ್ಣ ನದಿ ತೀರದಲ್ಲಿ ಇದ್ದು, ಆಗಾಗ ಮೊಸಳೆಗಳು ನದಿಯ ತೀರದಲ್ಲಿ ಕಂಡು ಬರುತ್ತಿವೆ. ಇದೀಗ ಮಳೆ ಇಲ್ಲದೇ ಕೃಷ್ಣ ನದಿ ಬತ್ತಿದ್ದು, ಜಲಚರ ಪ್ರಾಣಿಗಳೂ ಕೂಡಾ ಸಂಕಷ್ಟ ಎದುರಿಸುತ್ತಿವೆ. ಮೊಸಳೆ ಸಹ ಆಹಾರ ಅರಿಸಿಕೊಂಡು ನದಿಯಿಂದ ಜನರು ವಾಸಿಸುವ ಪ್ರದೇಶಕ್ಕೆ ಬಂದಿದೆ.
ಇದನ್ನೂ ಓದಿ :ನೀರಿಗಾಗಿ ಕೃಷಿ ಜಮೀನುಗಳಿಗೆ ಲಗ್ಗೆ ಇಡುತ್ತಿರುವ ಮೊಸಳೆ: ಬೃಹದಾಕಾರದ ಮೊಸಳೆ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ