ಮಾರಕಾಸ್ತ್ರಗಳೊಂದಿಗೆ ಗ್ರಾಮಕ್ಕೆ ನುಗ್ಗಿದ ಪುಡಿ ರೌಡಿಗಳು: ಪುಂಡರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನರು - ಹೊಸಪಾಳ್ಯ ಯುವಕರ ಮೇಲೆ ಹಲ್ಲೆ
Published : Aug 24, 2023, 2:36 PM IST
ತುಮಕೂರು :ರಾತ್ರೋರಾತ್ರಿ ಗ್ರಾಮಕ್ಕೆ ನುಗ್ಗಿ ಹಲ್ಲೆ ನಡೆಸಲು ಬಂದಿದ್ದ ಪುಂಡರ ಗುಂಪನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿಯ ಹೊಸಪಾಳ್ಯ ಗ್ರಾಮದಲ್ಲಿ ನಡೆದಿದೆ. ಹೊಸಪಾಳ್ಯದ ಯುವಕರಿಗೆ ಥಳಿಸಲು ಸ್ಕೆಚ್ ಹಾಕಿಕೊಂಡು ಬಂದಿದ್ದ ಪುಡಿ ರೌಡಿಗಳು, ತುಮಕೂರು ಮೂಲದವರೆಂದು ಅಂದಾಜಿಸಲಾಗಿದೆ.
ಹಲ್ಲೆ ಮಾಡಲು ಯತ್ನಿಸಿದ ಆರು ಮಂದಿ ಪುಂಡರನ್ನು ವಶಕ್ಕೆ ಪಡೆದ ಚಿಕ್ಕನಾಯಕನಹಳ್ಳಿ ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ. ಜೊತೆಗೆ, ಆರೋಪಿಗಳ ಬಳಿ ಇದ್ದ ಮಚ್ಚು, ಲಾಂಗ್ ಸೇರಿದಂತೆ ಹಲವು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಹುಡುಗಿ ವಿಚಾರಕ್ಕೆ ಸಂಬಂಧಿಸಿದಂತೆ ಹೊಸಪಾಳ್ಯ ಯುವಕರ ಮೇಲೆ ಹಲ್ಲೆ ನಡೆಸಲು ಬಂದಿದ್ದರು ಎಂದು ಜನರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.