ಯುವಕನನ್ನು ರಸ್ತೆಯಲ್ಲಿ ಎಳೆದೊಯ್ದ ದುಷ್ಕರ್ಮಿಗಳು.. ಸಿಸಿಟಿವಿಯಲ್ಲಿ ಕೃತ್ಯ ಸೆರೆ - ವಿಡಿಯೋ - ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬರೇಲಿ (ಉತ್ತರ ಪ್ರದೇಶ) : ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಮೂವರು ದುಷ್ಕರ್ಮಿಗಳು ಯುವಕನನ್ನು ರಸ್ತೆಯಲ್ಲಿ ಎಳೆದೊಯ್ದಿದಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಯುವಕನನ್ನು ಎಳೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೈರಲ್ ವಿಡಿಯೋದಲ್ಲಿ, ಮೂವರು ದುಷ್ಕರ್ಮಿಗಳು ಬೈಕ್ನಲ್ಲಿ ಸಂಚರಿಸುತ್ತಿದ್ದಾರೆ. ಇದರಲ್ಲಿ ಹಿಂದೆ ಕುಳಿತಿರುವ ವ್ಯಕ್ತಿಯು ಯುವಕನ ಕೈಯನ್ನು ಹಿಡಿದಿದ್ದು, ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಾರೆ. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿರುವವರು ಇದನ್ನು ಕಂಡು ದಂಗಾಗಿದ್ದಾರೆ. ಈ ಕೃತ್ಯವು ಜುಲೈ 25ರಂದು ನಡೆದಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾರಾದರಿ ಪೊಲೀಸ್ ಠಾಣೆ ಅಧಿಕಾರಿ, ದುಷ್ಕರ್ಮಿಗಳು ವ್ಯಕ್ತಿಯೋರ್ವನನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಯಾವಾಗ ನಡೆದಿದೆ, ಸಂತ್ರಸ್ತರು ಯಾರು ಮತ್ತು ದುಷ್ಕರ್ಮಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಇದುವರೆಗೆ ಪ್ರಕರಣ ದಾಖಲಾಗಿಲ್ಲ. ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಕಾರಿನ ಗ್ಲಾಸ್ ಒಡೆದು ಕಳ್ಳರ ಕೈಚಳಕ: ಕ್ಷಣಾರ್ಧದಲ್ಲಿ ಹಣದ ಬ್ಯಾಗ್ ಕದ್ದು ಎಸ್ಕೇಪ್ ಆದ ಖದೀಮರು