ಕೋರ್ಟ್ ಆದೇಶದ ಮೇರೆಗೆ ಜಪ್ತಿಗೆ ತೆರಳಿದ್ದ ಪೊಲೀಸರ ಮೇಲೆ ಮಹಿಳೆಯರಿಂದ ಹಲ್ಲೆ - ಪೊಲೀಸರ ಮೇಲೆ ಮಹಿಳೆಯರಿಂದ ಹಲ್ಲೆ
Published : Sep 7, 2023, 4:37 PM IST
ಲಖನೌ (ಉತ್ತರ ಪ್ರದೇಶ): ನ್ಯಾಯಾಲಯದ ಆದೇಶದ ಮೇರೆಗೆ ಅಂಗಡಿ ಜಪ್ತಿ ಮಾಡಲು ಹೋಗಿದ್ದ ಮೂವರು ಮಹಿಳಾ ಪೊಲೀಸರ ಮೇಲೆ ಕೆಲ ಮಹಿಳೆಯರು ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಬುಧವಾರ ನಡೆದಿದೆ. ಈ ಘಟನೆ ಸಂಬಂಧ ಆರೋಪಿತ ಮೂವರು ಮಹಿಳೆಯರ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಇಲ್ಲಿನ ಪಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಸರೋಸಾ ಗ್ರಾಮದ ಚಂದ್ರಕಿರಣ್ ಗುಪ್ತಾ ಅಲಿಯಾಸ್ ಸೀಮಾ ಗುಪ್ತಾ ಅವರ ಪತಿ ರವೀಂದ್ರ ಗುಪ್ತಾ ಅವರ ಸ್ನೇಹಿತ ಅರುಣ್ ಎಂಬುವವರು ಉದ್ಯಮ ಪ್ರಾರಂಭಿಸಲು 35 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದರಲ್ಲಿ ರವೀಂದ್ರ ಜಾಮೀನುದಾರರಾಗಿದ್ದರು. ಬ್ಯಾಂಕ್ ಸಾಲವನ್ನು ಸಕಾಲದಲ್ಲಿ ಮರುಪಾವತಿಸದ ಕಾರಣ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಆಗ ಕೋರ್ಟ್ ಅಂಗಡಿ ಜಪ್ತಿಗೆ ಆದೇಶಿಸಿತ್ತು.
ಅಂತೆಯೇ, ಬುಧವಾರ ಎಸಿಎಂ 6 ಮೀನಾಕ್ಷಿ ದ್ವಿವೇದಿ ಅವರೊಂದಿಗೆ ಕಂದಾಯ ಅಧಿಕಾರಿ, ಮಹಿಳಾ ಪೊಲೀಸರು, ಬ್ಯಾಂಕ್ ಅಧಿಕಾರಿ, ವಕೀಲರ ತಂಡ ಚಂದ್ರಕಿರಣ್ ಗುಪ್ತಾ ಅಂಗಡಿಗೆ ಆಗಮಿಸಿತ್ತು. ಈ ವೇಳೆ, ತಂಡದಲ್ಲಿದ್ದ ಮಹಿಳಾ ಇನ್ಸ್‌ಪೆಕ್ಟರ್ ಹಾಗೂ ಕಾನ್ಸ್ಟೇಬಲ್ಗಳನ್ನು ಚಂದ್ರಕಿರಣ್ ಹಾಗೂ ಇವರ ಜೊತೆಗಿದ್ದ ಇತರ ಇಬ್ಬರು ಮಹಿಳೆಯರು ತಡೆಯಲು ಯತ್ನಿಸಿದರು. ಅಲ್ಲದೇ, ನಡುರಸ್ತೆಯಲ್ಲೇ ಮಹಿಳಾ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಮೂವರು ಮಹಿಳಾ ಪೊಲೀಸರು ಗಾಯಗೊಂಡಿದ್ದಾರೆ. ಈ ಬಗ್ಗೆ ಕಂದಾಯ ಲೆಕ್ಕಾಧಿಕಾರಿ ವಿಜಯ್ ಪ್ರತಾಪ್ ನೀಡಿದ ದೂರಿನ ಮೇರೆಗೆ ಚಂದ್ರಾಕಿರಣ್ ಗುಪ್ತಾ ಸೇರಿ ಮೂವರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಶ್ರೀಕಾಂತ್ ರೈ ತಿಳಿಸಿದ್ದಾರೆ.