ಭೀಕರ ರಸ್ತೆ ಅಪಘಾತದಲ್ಲಿ ಇಬ್ಭಾಗವಾದ ಕಾರು: ಪವಾಡ ಸದೃಶ ರೀತಿಯಲ್ಲಿ ಚಾಲಕ ಪಾರು - ವಿಡಿಯೋ - ಪವಾಡ ಸದೃಶ ರೀತಿಯಲ್ಲಿ ಚಾಲಕ ಪಾರು
ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಕಾರು ಚಾಲಕ ಪ್ರಾಣಾಪಾಯದಿಂದ ಪಾರದ ಘಟನೆ ತಡರಾತ್ರಿ ಕಾಮಾಕ್ಷಿಪಾಳ್ಯ ಸಂಚಾರ ಠಾಣಾ ವ್ಯಾಪ್ತಿಯ ಪಾಪರೆಡ್ಡಿ ಪಾಳ್ಯ ಬಳಿ ನಡೆದಿದೆ. ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಮರಕ್ಕೆ ಡಿಕ್ಕಿಯಾದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡು, ಇಬ್ಭಾಗವಾಗಿದೆ. ಚಾಲಕ ಯಶಸ್ ಎಂಬಾತನಿಗೆ ಗಂಭೀರವಾದ ಗಾಯಗಳಾಗಿವೆ. ಖಾಸಗಿ ಆಸ್ಪತ್ರೆಗೆ ಚಾಲಕನನ್ನ ದಾಖಲಿಸಲಾಗಿದೆ. ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿರುವ ಶಂಕೆ ವ್ಯಕ್ತವಾಗಿದ್ದು, ರಾತ್ರಿ ವೇಳೆ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆ ಇದ್ದಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಈ ಕುರಿತು ಬೆಂಗಳೂರು ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಸುಮನ್.ಡಿ.ಪೆನ್ನೇಕರ್ ಮಾತನಾಡಿ, "ತಡರಾತ್ರಿ ಕಾಮಾಕ್ಷಿ ಪಾಳ್ಯ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ ವರದಿಯಾಗಿದೆ. ನಾಗರಬಾವಿಯಿಂದ ಕೆಂಗೇರಿ ಕಡೆಗೆ ಬರುತ್ತಿದ್ದಾಗ ಔಟರ್ ರಿಂಗ್ ರೋಡ್ನಲ್ಲಿ ಯಶಸ್ ಎಂಬ 24 ವರ್ಷದ ವ್ಯಕ್ತಿ ಕಾರನ್ನು ವೇಗವಾಗಿ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸುಮಾರು 12:45ಕ್ಕೆ ಡಿವೈಡರ್ಗೆ ಗುದ್ದಿದ ಪರಿಣಾಮ ಅಪಘಾತವಾಗಿದೆ" ಎಂದು ತಿಳಿಸಿದರು.
"ಇದರಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಚಾಲಕನನ್ನು ಆಸ್ಪತ್ರೆ ದಾಖಲಿಸಲಾಗಿದೆ. ಕಾರು ಜಖಂಗೊಂಡಿದೆ. ಈ ಕುರಿತು ಆತನ ತಂದೆ ನೀಡಿದ ದೂರಿನ ಆಧಾರದ ಮೇಲೆ ಕಾಮಾಕ್ಷಿ ಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾರಿನಲ್ಲಿ ತುಂಬಾ ವೇಗವಾಗಿ ಬಂದಿದ್ದ ಚಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ, ಮೇಲ್ನೂಟಕ್ಕೆ ಚಾಲಕ ಮದ್ಯ ಅಥವಾ ಡ್ರಗ್ಸ್ನ ಅಮಲಿನಲ್ಲಿ ಇದ್ದಿರಬಹುದು ಎಂಬ ಕಾರಣಕ್ಕೆ ಆತನ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದೆವೆ. ಮುಂದಿನ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ" ಎಂದು ಹೇಳಿದರು.
ಇದನ್ನೂ ಓದಿ:Bengaluru crime: ಬಾಡಿಗೆ ಮನೆ ಮಾಲೀಕರ ಚಿನ್ನಾಭರಣ ದೋಚಿದ ಲಿವಿಂಗ್ ಟುಗೆದರ್ ಜೋಡಿ ಅಂದರ್