ಪಟ್ಟಣ ಪಂಚಾಯತ್ ಮಾಡಿದ ರಸ್ತೆ ದುರಸ್ತಿಗೆ ಕ್ರೆಡಿಟ್ ಬ್ಯಾನರ್: ಶಾಸಕ ಟಿ.ಡಿ.ರಾಜೇಗೌಡ ಸ್ಪಷ್ಟನೆ ಹೀಗಿದೆ
Published : Dec 20, 2023, 9:32 PM IST
ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪದಲ್ಲಿ ಪಟ್ಟಣ ಪಂಚಾಯತ್ ಅನುದಾನದಲ್ಲಿ ರಸ್ತೆ ದುರಸ್ತಿ ಮಾಡಲಾಗಿದೆ. ಆದರೆ, ಶಾಸಕ ಟಿ.ಡಿ.ರಾಜೇಗೌಡ ಬ್ಯಾನರ್ ಹಾಕಿಸಿಕೊಂಡು ಅದರ ಶ್ರೇಯಸ್ಸನ್ನು ಪಡೆಯಲು ಯತ್ನಿಸಿದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಖುದ್ದು ಶಾಸಕರು ಪ್ರತಿಕ್ರಿಯಿಸಿ, ಜನರು ತಮ್ಮ ಮೇಲಿನ ಅಭಿಮಾನಕ್ಕಾಗಿ ಬ್ಯಾನರ್ ಹಾಕಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕೊಪ್ಪ ಪಟ್ಟಣದಲ್ಲಿ ರಸ್ತೆ ಸಾಕಷ್ಟು ಹದಗೆಟ್ಟಿತ್ತು. ಈ ಸಂಬಂಧ ಸಾರ್ವಜನಿಕರ ಅನುಕೂಲಕ್ಕಾಗಿ ಪಟ್ಟಣ ಪಂಚಾಯತ್ ತನ್ನ ಅನುದಾನದಿಂದ ರಸ್ತೆ ದುರಸ್ತಿ ಕಾರ್ಯ ಮಾಡಿತ್ತು. ಟಿ.ಡಿ.ರಾಜೇಗೌಡ 2018ರಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ ರಸ್ತೆ ದುರಸ್ತಿ ಮಾಡಿಸಿದ್ದರು. ಆದರೆ, ದುರಸ್ತಿ ಮಾಡಿದ ಗುತ್ತಿಗೆದಾರನಿಗೆ ಯಾವುದೇ ಬಿಲ್ ಪಾವತಿ ಮಾಡಿರಲಿಲ್ಲ. ಬಳಿಕ 2023ರಲ್ಲಿ ಪಟ್ಟಣ ಪಂಚಾಯತ್ ಜನರ ತೆರಿಗೆ ಹಣದಲ್ಲಿ ಬಿಲ್ ಪಾವತಿ ಮಾಡಿತ್ತು. ಬಳಿಕ 2-3 ಬಾರಿ ರಸ್ತೆ ದುರಸ್ತಿ ಕಾರ್ಯ ಮಾಡಲಾಗಿದೆ. ಆದರೆ, ಶಾಸಕರ ನಿಧಿಯಿಂದ ಈವರೆಗೂ ಯಾವುದೇ ಅನುದಾನ ನೀಡಿಲ್ಲ ಎಂದು ಪಟ್ಟಣ ಪಂಚಾಯತ್ ಸದಸ್ಯರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಟಿ.ಡಿ.ರಾಜೇಗೌಡ, ಈ ರಸ್ತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯತಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಸಾರ್ವಜನಿಕರು ನನ್ನ ಗಮನಕ್ಕೆ ತಂದರು. ಈ ಬಗ್ಗೆ ಪಟ್ಟಣ ಪಂಚಾಯಿತಿಯ ಮೂಲಕ ಒಂದು ವಾರದಲ್ಲಿ ರಸ್ತೆ ಸರಿಪಡಿಸುವ ಕೆಲಸ ಮಾಡಿದ್ದೇನೆ. ಜನರು ಅಭಿಮಾನಕ್ಕಾಗಿ ಬ್ಯಾನರ್ ಹಾಕಿದ್ದಾರೆ. ಅದಕ್ಕೆ ನಾನು ಏನು ಹೇಳಲು ಬರುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ, ಟಿಪ್ಪಣಿಗಳು ಸಹಜ. ಅದಕ್ಕೆ ನಾನು ಉತ್ತರಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಶಿವಮೊಗ್ಗ: ನಾಗಸಮುದ್ರ ಗ್ರಾಮದಲ್ಲಿ ಕರಡಿ ಓಡಾಟ