ಕಾಂಗ್ರೆಸ್ ಮುಖಂಡರಿಂದ ಕುಕ್ಕರ್ ಡಿನ್ನರ್ ಸೆಟ್ ದಾಸ್ತಾನು ಆರೋಪ: ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಗೋದಾಮು ಪರಿಶೀಲನೆ - ಕಾಂಗ್ರೆಸ್ ಶಾಸಕ ಏಚ್ ಡಿ ರಂಗನಾಥ್
ತುಮಕೂರು: ಚುನಾವಣೆಗೂ ಮುನ್ನವೇ ಮತದಾರರಿಗೆ ಹಂಚಲು ಕಾಂಗ್ರೆಸ್ ಮುಖಂಡರು ಗೋದಾಮಿನಲ್ಲಿ ದಾಸ್ತಾನು ಮಾಡಿದ್ದರು ಎನ್ನಲಾದ ಕುಕ್ಕರ್, ಡಿನ್ನರ್ ಸೆಟ್, ಇತರ ಸಾಮಗ್ರಿಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಪರಿಶೀಲಿಸಿದೆ. ಮುಖಂಡರು ಹರಿಯಾಣದಿಂದ ಕಂಟೈನರ್‌ಗಳಲ್ಲಿ ಗೃಹೋಪಯೋಗಿ ಸಾಮಗ್ರಿಗಳನ್ನು ತಂದು ತುಮಕೂರಿನ ಕುಣಿಗಲ್ ತಾಲೂಕಿನ ಅಮೃತೂರು ಗ್ರಾಮದ ಸಮೀಪ ಚಿಕ್ಕಕೆರೆ ಬಳಿಯ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎಂದು ಜೆಡಿಎಸ್ ಮುಖಂಡರು ದೂರು ನೀಡಿದ್ದರು. ದೂರಿನ ಮೇರೆಗೆ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ನಾಗರಾಜು ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಇಬ್ಬರು ಕಾಂಗ್ರೆಸ್ ಮುಖಂಡರ ಹೆಸರಿನಲ್ಲಿ ಸಾಮಗ್ರಿಗಳನ್ನು ಖರೀದಿಸಿರುವ ಬಿಲ್ ಪತ್ತೆಯಾಗಿವೆ. ಇದರ ಜತೆಗೆ ಇವುಗಳನ್ನು ಹೊತ್ತು ತಂದಿದ್ದ ವಾಹನಗಳ ದಾಖಲೆಗಳು ಸಮರ್ಪಕವಾಗಿರುವುದು ಕಂಡು ಬಂದಿದೆ. ಹಾಗಾಗಿ ವಾಹನಗಳನ್ನು ಅಧಿಕಾರಿಗಳು ಬಿಟ್ಟು ಕಳುಹಿಸಿದ್ದಾರೆ. ಸಾಮಗ್ರಿ ಖರೀದಿಸಿರುವುದಕ್ಕೆ, ದಾಖಲೆಗಳು ಸರಿಯಾಗಿವೆ. ಒಂದು ವೇಳೆ ತೆರಿಗೆ ವಂಚನೆ, ಲೋಪದೋಷ ಕಂಡು ಬಂದಿದ್ದರೆ ಕ್ರಮ ಕೈಗೊಳ್ಳಬಹುದಿತ್ತು. ಈಗ ಕ್ರಮ ಕೈಗೊಳ್ಳುವುದು ಕಷ್ಟಕರ ಎಂದು ತಂಡದಲ್ಲಿದ್ದ ಅಧಿಕಾರಿಯೊಬ್ಬರು ತಿಳಿಸಿದರು.
ಕಾಂಗ್ರೆಸ್ ಶಾಸಕ ಏಚ್ ಡಿ ರಂಗನಾಥ್ ಅವರು ಚುನಾವಣೆಗೆ ಮುನ್ನ ಕುಕ್ಕರ್, ತವಾ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಮತದಾರರಿಗೆ ವಿತರಿಸುತ್ತಿದ್ದಾರೆ ಎಂದು ಜೆಡಿಎಸ್, ಬಿಜೆಪಿ ಮುಖಂಡರು ಈ ಮೊದಲು ಆರೋಪಿಸಿದ್ದರು. ಈಗ ಮತ್ತೊಮ್ಮೆ ಕುಕ್ಕರ್ ಇತರ ಸಾಮಗ್ರಿಗಳನ್ನು ತಂದು ದಾಸ್ತಾನು ಮಾಡುತ್ತಿರುವ ವಿಚಾರ ತಿಳಿದ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಿ ಎನ್ ಜಗದೀಶ್ ಅವರು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಗುಂಪು ಚದರಿಸಿದರು.
ಇದನ್ನೂ ನೋಡಿ: ಶಾಸಕ ರಾಮಲಿಂಗ ರೆಡ್ಡಿ ಜೊತೆ ಕಿಚ್ಚ ಸುದೀಪ್ ಮಾತುಕತೆ: ಕುತೂಹಲ