ಶಾಲಾ ಬಿಸಿಯೂಟದ ಅಡುಗೆ ಕೊಠಡಿಯಲ್ಲಿ ಕುಕ್ಕರ್ ಬ್ಲಾಸ್ಟ್.. ಒಬ್ಬ ಸಿಬ್ಬಂದಿಗೆ ಗಾಯ :- ವಿಡಿಯೋ ನೋಡಿ - Cooker explosion
Published : Nov 9, 2023, 5:41 PM IST
ಬಳ್ಳಾರಿ:ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟ್ಟಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಒಲೆಯ ಮೇಲೆ ತೊಗರಿಬೇಳೆ ಬೇಯಿಸಲು ಇಟ್ಟಿದ್ದ ಕುಕ್ಕರ್ ಸ್ಫೋಟಗೊಂಡ ಘಟನೆ ಬುಧವಾರ ನಡೆದಿದೆ. ಪರಿಣಾಮ ಅಡುಗೆ ಸಿದ್ಧತೆಯಲ್ಲಿ ತೊಡಗಿದ್ದ ಲೋಕಮ್ಮ ಅವರಿಗೆ ಬಿಸಿ ನೀರು ಸಿಡಿದು ಗಾಯವಾಗಿದೆ. ಉಳಿದ ಮೂವರು ಮಹಿಳಾ ಅಡುಗೆಯವರು ತಕ್ಷಣ ಹೊರಗಡೆ ಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಗ್ಯಾಸ್ ಒಲೆ ಮೇಲೆ 20 ಲೀಟರ್ ಕುಕ್ಕರ್‌ನಲ್ಲಿ 3 ಸೇರು ತೊಗರಿಬೇಳೆ ಬೇಯಿಸುತ್ತಿದ್ದಾಗ ವಿಜಿಲ್ ಬಾರದೇ ಏಕಾಏಕಿ ಕುಕ್ಕರ್ ಸ್ಫೋಟಗೊಂಡಿದೆ. ಕೊಠಡಿಯ ಚಾವಣಿ, ಅಕ್ಕಪಕ್ಕದ ಗೋಡೆಗೆ ತೊಗರಿಬೇಳೆ ಸಿಡಿದಿದೆ. ಈ ಕುರಿತು ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ಮಾತನಾಡಿ, ಇಸ್ಕಾನ್ ಅಕ್ಷಯ ಪಾತ್ರೆಯ ಬಿಸಿಯೂಟ ಸೌಲಭ್ಯ ಕಲ್ಪಿಸುವಂತೆ ಬಿಸಿಯೂಟ ನಿರ್ದೇಶಕರಿಗೆ ಹಾಗೂ ಅಧಿಕಾರಿಗಳಿ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಸದ್ಯ ಬಿಸಿಯೂಟ ತಯಾರಿಸುವ ಪಾತ್ರೆ, ಇತರ ಸಾಮಗ್ರಿಗಳು ತುಂಬಾ ಹಳೆಯಾಗಿದೆ. ಸುಸ್ಥಿತಿಯಲ್ಲಿ ಇಲ್ಲದ ಕಾರಣ ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ. 600 ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದು, ಶಿಕ್ಷಕರು ಪಾಠದ ಕಡೆ ಗಮನಹರಿಸಲು ಆಗದೇ ಬಿಸಿಯೂಟದ ಕಡೆಗೆ ಹೆಚ್ಚಿನ ಲಕ್ಷ ಕೊಡಬೇಕಾದ ಸ್ಥಿತಿ ಇದೆ. ಶಿಕ್ಷಕರು ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಇಸ್ಕಾನ್ ಬಿಸಿಯೂಟ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಪ್ರಚಾರ ರಥದಿಂದ ಆಯತಪ್ಪಿ ಕೆಳಬಿದ್ದ ಕೆಟಿಆರ್: ಅಪಘಾತದಿಂದ ಪಾರಾದ ಬಿಆರ್ಎಸ್ ನಾಯಕ.. ವಿಡಿಯೋ