ಬಿಜೆಪಿ ಶಾಸಕರ ಬೆಂಗಾವಲು ವಾಹನ ಗುದ್ದಿ ಟ್ರಕ್ ಚಾಲಕ ಸಾವು: ಹೆದ್ದಾರಿಯಲ್ಲಿ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ - ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ರಸ್ತೆ ಅಪಘಾತ
ರೇವಾ (ಮಧ್ಯಪ್ರದೇಶ):ಬಿಜೆಪಿ ಶಾಸಕರೊಬ್ಬರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ ಟ್ರಕ್ ಚಾಲಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಘಟನೆ ನಂತರ ಮೃತದೇಹವನ್ನು ಹೆದ್ದಾರಿಯಲ್ಲಿ ಇಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಸುಮಾರು 4 ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು.
ಇಲ್ಲಿನ ಹನುಮಾನ ಪೊಲೀಸ್ ಠಾಣೆ ವ್ಯಾಪ್ತಿಯ ಅಟಾರಿಯಾ ಗ್ರಾಮದ ನಿವಾಸಿ ದುರ್ಯೋಧನ ಪಟೇಲ್ ಎಂಬಾತನೇ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಚಂದೌಲಿ ಕ್ಷೇತ್ರದ ಬಿಜೆಪಿ ಶಾಸಕ ಸತ್ಯೇಂದ್ರ ಸಿಂಗ್ ರೇವಾ ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಮಾರ್ಗ ಮಧ್ಯೆ ಟ್ರಕ್ ಚಾಲಕ ದುರ್ಯೋಧನ ಪಟೇಲ್ಗೆ ಶಾಸಕರ ಬೆಂಗಾವಲು ವಾಹನ ಡಿಕ್ಕಿ ಹೊಡೆದಿದೆ. ಆದರೆ, ಸ್ಥಳೀಯ ಮುಖಂಡರ ಶಿಫಾರಸಿನ ಮೇಲೆ ಶಾಸಕರ ಬೆಂಗಾವಲು ಪಡೆಯ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಪೊಲೀಸರು ಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅಲ್ಲದೇ, ಮೃತದೇಹವನ್ನು ಹೆದ್ದಾರಿಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಅಜಯ್ ಶ್ರೀವಾಸ್ತವ ಸೇರಿ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾನಿರತರ ಮನವೊಲಿಸಿದ್ದಾರೆ. ಈ ಕುರಿತು ಎಸ್ಪಿ ವೀರೇಂದ್ರ ಜೈನ್ ಪ್ರತಿಕ್ರಿಯಿಸಿ, ರಸ್ತೆ ಅಪಘಾತದ ಬಗ್ಗೆ ಪ್ರಕರಣ ದಾಖಲಿಸಲು ವಿಳಂಬವಾಗಿದೆ ಎಂದು ಆರೋಪಿಸಿ ಮೃತನ ಕುಟುಂಬಸ್ಥರು ರಸ್ತೆ ತಡೆ ನಡೆಸಿದ್ದಾರೆ. ಅಲ್ಲದೇ, ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಸದ್ಯ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕಲಬುರಗಿ: ಬೈಕ್ - ಗೂಡ್ಸ್ ವಾಹನ ಡಿಕ್ಕಿಯಾಗಿ ತಂದೆ-ಮಗಳು ಸಾವು; ತಾಯಿ - ಮಗ ಆಸ್ಪತ್ರೆಗೆ ದಾಖಲು