'ಶೇ 40 ಭ್ರಷ್ಟಾಸುರ ಸರ್ಕಾರ' ಸಂಹಾರ: ಕಾಂಗ್ರೆಸ್ನಿಂದ ವಿನೂತನ ಪ್ರತಿಭಟನೆ
ಮೈಸೂರು:ವಿಧಾನಸಭೆ ಚುನಾವಣೆಮತದಾನಕ್ಕೆ ಇನ್ನು ಕೆಲವೇ ದಿನ ಬಾಕಿ ಇದೆ. ಈ ನಡುವೆ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಜಿಲ್ಲೆಯ ಟಿ. ನರಸೀಪುರದ ವಿದ್ಯೋದಯ ಕಾಲೇಜು ಸರ್ಕಲ್ ಬಳಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು. ಸರ್ಕಾರವು ರೈತ ಹಾಗೂ ಜನರ ವಿರೋಧಿಯಾಗಿದೆ. ರಸ್ತೆ ಗುಂಡಿಗಳ ಸರ್ಕಾರ, ಉದ್ಯೋಗಗಳನ್ನು ಸೃಷ್ಟಿ ಮಾಡದ, ಬೆಲೆ ಏರಿಕೆ ಹಾಗೂ ಅಸಮರ್ಥ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
40 ಪರ್ಸೆಂಟ್ ಸರ್ಕಾರ ಎಂದು ಭಸ್ಮಾಸುರ ಪ್ರತಿಕೃತಿ ಮಾಡಿದ್ದರು. ಎಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿಲ್ಲು ಪ್ರಯೋಗಿಸಿ 'ಶೇ 40 ಭ್ರಷ್ಟಾಸುರ'ನನ್ನು ಸಂಹಾರ ಮಾಡಿದರು. ಬಳಿಕ ಪ್ರತಿಕೃತಿಯನ್ನು ಸುಡಲಾಯಿತು.
ಬಳಿಕ ಮಾತನಾಡಿದ ಸುರ್ಜೇವಾಲ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ರಾಮ ಲಕ್ಷ್ಮಣರ ರೀತಿ ಇದ್ದಾರೆ. ಈ ಭ್ರಷ್ಟಾಚಾರದ ಸರ್ಕಾರವನ್ನು ಸಂಹಾರ ಮಾಡುತ್ತಾರೆ ಎಂದರು. ಭ್ರಷ್ಟಾಚಾರ ಅಸುರರ ಪ್ರತಿಕೃತಿ ದಹನ ಮಾಡುತ್ತಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಎಂದು ಸಿದ್ದರಾಮಯ್ಯ ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಈ ಭ್ರಷ್ಟ ಸರ್ಕಾರವನ್ನು ತೆಗೆಯಬೇಕು. ಸಂಹಾರ ಮಾಡಲು ನಾವು ಬಂದಿದ್ದೇವೆ. ಯುವಕರಿಂದಲೇ ಸುಡುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಟಿ.ನರಸೀಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಹೆಚ್.ಸಿ ಮಹಾದೇವಪ್ಪ, ಮುಖಂಡರಾದ ಬಿ.ಸೋಮಶೇಖರ್ ಸೇರಿದಂತೆ ಇತರ ಪ್ರಮುಖರು ಭಾಗಿಯಾಗಿದ್ದರು.
ಇದನ್ನೂ ಓದಿ:ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆಗೆ ಬೆಂಕಿ ಹಚ್ಚಿ ಬಜರಂಗದಳ ಪ್ರತಿಭಟನೆ