ಲಂಚ ಸ್ವೀಕಾರ ಪ್ರಕರಣದ ಬಗ್ಗೆ ಸಮಗ್ರ ತನಿಖೆ, ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ: ಬಿಎಸ್ವೈ
ಬೆಂಗಳೂರು:ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರ ಪುತ್ರ ಪ್ರಶಾಂತ್ ಮಾಡಾಳ್ ಲಂಚ ಸ್ವೀಕಾರ ಪ್ರಕರಣ ಸಂಬಂಧ ಸಮಗ್ರವಾದ ತನಿಖೆ ನಡೆಯುತ್ತಿದೆ. ಈ ವಿಚಾರದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದರು.
ಬೆಂಗಳೂರಿನ ತಮ್ಮ ಕಾವೇರಿ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಸೂಕ್ತವಾದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪ್ರಕರಣದಲ್ಲಿ ಯಾರೂ ಕೂಡ ಮಧ್ಯಪ್ರವೇಶ ಮಾಡುತ್ತಿಲ್ಲ. ಕಾನೂನು ಚೌಕಟ್ಟಿನಲ್ಲಿ ಯಾವ ಕ್ರಮ ಆಗಬೇಕೋ ಎಲ್ಲವನ್ನೂ ಮಾಡಲಾಗುವುದು ಅಂತ ಸ್ವತಃ ಸಿಎಂ ಹೇಳಿದ್ದಾರೆ. ಅದಾದ ಮೇಲೆ ನಾನೇನು ಮಾತನಾಡಲು ಹೋಗುವುದಿಲ್ಲ ಎಂದರು.
ಲಂಚ ಪ್ರಕರಣ ಖಂಡಿಸಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ಬಗ್ಗೆ ನಾನೇನು ಉತ್ತರ ನೀಡುವುದಿಲ್ಲ ಎಂದು ಇದೇ ವೇಳೆ ಬಿಎಸ್ ಯಡಿಯೂರಪ್ಪನವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಭ್ರಷ್ಟಾಚಾರ ಆರೋಪದ ಕಾರಣ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಇಂದು ಮುಖ್ಯಮಂತ್ರಿಗಳ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಿಎಂ ಪ್ರತಿಕ್ರಿಯೆ:ಲಂಚ ಪ್ರಕರಣದ ಬಗ್ಗೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲೋಕಾಯುಕ್ತವು ಸರ್ವ ಸ್ವತಂತ್ರವಾದ ಸಂಸ್ಥೆ. ಲಂಚ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಾವು ಲೋಕಾಯುಕ್ತವನ್ನು ಮತ್ತೆ ಸ್ಥಾಪನೆ ಮಾಡಿರುವುದೇ ಭ್ರಷ್ಟಾಚಾರ ನಿಗ್ರಹಿಸುವುದಕ್ಕಾಗಿ ಎಂದು ಹೇಳಿದ್ದರು. ಅಲ್ಲದೆ, ಈ ಹಿಂದೆ ಕಾಂಗ್ರೆಸ್ನವರು ಮುಚ್ಚಿಹಾಕಿದ್ದ ಪ್ರಕರಣಗಳ ತನಿಖೆ ಮಾಡಿಸುವುದಾಗಿಯೂ ಸಿಎಂ ತಿಳಿಸಿದ್ದರು.